ಮಂಗಳೂರು: ಮಾದಕ ವಸ್ತು ಜಾಲದಲ್ಲಿ ನಟಿ, ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಹೆಸರು ಮತ್ತೊಮ್ಮೆ ಬಲವಾಗಿ ಕೇಳಿಬಂದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಅನುಶ್ರೀ ನಿನ್ನೆ ತಮ್ಮ ವಕೀಲರನ್ನು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪ ಕೇಳಿಬರುತ್ತಿದ್ದಂತೆಯೇ ಅತೀ ಆಪ್ತರನ್ನು ಹೊರತುಪಡಿಸಿ ಬೇರೆ ಯಾರ ಸಂಪರ್ಕಕ್ಕೂ ಸಿಗದ ಅನುಶ್ರೀ ಸದ್ಯ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಪ್ರಕರಣ ಮತ್ತೆ ಮುನ್ನೆಲೆಗೆ ಬಂದರೆ ಏನೆಲ್ಲಾ ಸಮಸ್ಯೆಯಾಗಬಹುದು ಎಂಬ ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡ್ರಗ್ಸ್ ಪ್ರಕರಣದಲ್ಲಿ ನಂಟು ಹೊಂದಿರುವ ಆರೋಪ ಕೇಳಿಬಂದ ಕಾರಣ ಅನುಶ್ರೀ ಪ್ರಕರಣದ ಕುರಿತು ತಮ್ಮ ವಕೀಲರ ಜತೆ ಚರ್ಚೆ ಮಾಡಿದ್ದಾರೆ. ಡ್ರಗ್ಸ್ ಕೇಸ್ ರೀ-ಓಪನ್ ಆಗುತ್ತಾ? ರೀ-ಓಪನ್ ಆಗಿದ್ದೇ ಹೌದಾದಲ್ಲಿ ಏನೆಲ್ಲಾ ಸಮಸ್ಯೆಯಾಗಬಹುದು ಎಂದು ಮಾಹಿತಿ ಪಡೆದಿದ್ದಾರೆ.
ಸದ್ಯ ಆದಷ್ಟು ದೂರ ಉಳಿಯುವ ಸಲುವಾಗಿಯೇ ಆ್ಯಂಕರ್ ಅನುಶ್ರೀ ಮುಂಬೈಗೆ ಹಾರಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ.
ಇದೇ ವೇಳೆ, ಅನುಶ್ರೀಯನ್ನು ಬಚಾವ್ ಮಾಡುವ ಸಲುವಾಗಿಯೇ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ತರುಣ್ ರಾಜ್ಗೆ ಪೊಲೀಸರು ರಿಲೀಫ್ ನೀಡಿದ್ದಾರೆ ಎಂಬ ಗುಮಾನಿಯೂ ಹುಟ್ಟಿಕೊಂಡಿದೆ. ಅನುಶ್ರೀಯನ್ನು ಪ್ರಕರಣದಿಂದ ಕೈಬಿಡಲು ದೊಡ್ಡ ಮಟ್ಟದಲ್ಲಿ ಒತ್ತಡ ಬರುತ್ತಿದೆ. ಹೀಗಾಗಿಯೇ ತರುಣ್ ರಾಜ್ಗೆ ಪೊಲೀಸರು ರಿಲೀಫ್ ಕೊಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಒಂದು ವೇಳೆ ತರುಣ್ ರಾಜ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದಲ್ಲಿ ಅನುಶ್ರೀಗೆ ನಿಶ್ಚಿತವಾಗಿಯೂ ತೊಂದರೆ ಆಗಲಿದೆ. ಆಕೆಯನ್ನು ಬಚಾವ್ ಮಾಡಬೇಕೆಂದರೆ ಇವನನ್ನೂ ಬಚಾವ್ ಮಾಡಬೇಕು. ಹೀಗಾಗಿ ಆತನ ಹೆಸರನ್ನು ಪೊಲೀಸರು ಕೈಬಿಟ್ಟಿದ್ದಾರೆ.
ತರುಣ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರೂ ಚಾರ್ಜ್ಶೀಟ್ನಲ್ಲಿ ತರುಣ್ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಸದ ಪೊಲೀಸರು ಪರೋಕ್ಷವಾಗಿ ಅನುಶ್ರೀಗೆ ಸಹಕರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅಸಲಿಗೆ ತರುಣ್ ರಾಜ್ ಡ್ರಗ್ಸ್ ರಿಪೋರ್ಟ್ ಪಾಸಿಟಿವ್ ಬಂದಿತ್ತು. ಆತನನ್ನು ವಶಕ್ಕೆ ಪಡೆದಾಗ ಡ್ರಗ್ಸ್ ಟೆಸ್ಟ್ ಮಾಡಿಸಿದ್ದರು. ಅದರ ರಿಪೋರ್ಟ್ ಪಾಸಿಟಿವ್ ಬಂದಿತ್ತು. ಹಾಗಿದ್ದರೂ ಇದೀಗ ಆತನನ್ನು ಪ್ರಕರಣದಿಂದ ಕೈಬಿಟ್ಟ ಪೊಲೀಸರು ಏನು ಸಂದೇಶ ನೀಡುತ್ತಿದ್ದಾರೆ? ಎಂಬ ಮಾತುಗಳು ಕೇಳಿಬಂದಿವೆ.
ಚಾರ್ಜ್ ಶೀಟ್ ನೋಡಿದರೆ ಪೊಲೀಸರ ನಡೆ ಮೇಲೆ ಅನುಮಾನ ಹುಟ್ಟುತ್ತಿದೆ. ಅನುಶ್ರೀಯನ್ನು ಬಚಾವ್ ಮಾಡಲು ತರುಣ್ ರಾಜ್ನನ್ನು ಪ್ರಕರಣದಿಂದ ಹೊರಕ್ಕೆ ಇಡಲಾಗಿದೆ ಎಂಬ ಆರೋಪ ಇದೆ.
ಇತ್ತ ಪ್ರಶಾಂತ್ ಸಂಬರಗಿ ಆಡಿರುವ ಮಾತುಗಳು ಕೂಡಾ ಸಂಚಲನ ಮೂಡಿಸುತ್ತಿದ್ದು, ಮಂಗಳೂರಿನಲ್ಲಿ ಡ್ರಗ್ ಕೇಸ್ ತನಿಖೆಯಲ್ಲಿರೋ ಲೋಪ ದೋಷದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಮತ್ತೆ ತನಿಖೆ ಚುರುಕುಗೊಳಿಸಬೇಕೆಂದು, ರಾಜಭವನಕ್ಕೆ ನೀಡಿರುವ ಪ್ರತದಲ್ಲಿ ನಮೂದಿಸಲಾಗಿದೆ.
ಜತೆಗೆ, ಪ್ರಭಾವಿ ರಾಜಕಾರಣಿಗಳ ಬಗ್ಗೆಯೂ ನಮೂದಿಸಲಾಗಿದೆ. ಅನುಶ್ರೀ ಸೇರಿದಂತೆ ತರುಣ್ ವಿಚಾರಣೆ, ಚಾರ್ಜ್ ಶಿಟ್ ಸಲ್ಲಿಕೆ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ನವೆಂಬರ್ ಒಂದರಂದೇ ಆಡಿಯೋ ರಿಲೀಸ್ ಮಾಡಲು ನಿರ್ಧಾರ ಮಾಡಲಾಗಿದ್ದು, ಪ್ರಶಾಂತ್ ಸಂಬರಗಿ ಆಡಿಯೋ ಬಾಂಬ್ ರಾಜ್ಯರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವುದು ಖಂಡಿತಾ ಎನ್ನಲಾಗಿದೆ.