Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಕತ್ತಲೆಯಲ್ಲಿರುವ ಕುಟುಂಬಳಿಗೆ 100 ದಿನಗಳೊಳಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ಅಧಿಕಾರಿಗಳಿಗೆ : ಸಚಿವ ಸುನಿಲ್ ಕುಮಾರ್ ತಾಕೀತು

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಗ್ರಾಮೀಣ ಭಾಗದಲ್ಲಿ ದುರಸ್ತಿಗೊಳಗಾದ ವಿದ್ಯುತ್ ಟ್ರಾನ್ಸ್​ಫಾರ್ಮರ್ (ಪರಿವರ್ತಕ)ಗಳ ಬದಲಾವಣೆಯನ್ನು 24 ಗಂಟೆಯೊಳಗೆ ಮಾಡಲೇಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದ ಜೆಸ್ಕಾಂ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಜೆಸ್ಕಾಂ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಯಾವುದೇ ಕಾರಣವಿಲ್ಲದೇ ಟ್ರಾನ್ಸ್​ಫಾರ್ಮರ್ ಬದಲಾವಣೆ ಪ್ರಕ್ರಿಯೆಯಲ್ಲಿ ವಿಳಂಬ ಮಾಡಬಾರದು ಎಂದು ತಾಕೀತು ಮಾಡಿದರು.

ಟ್ರಾನ್ಸ್​ಫಾರ್ಮರ್ ಬದಲಾವಣೆ ಸಂಬಂಧ ರೈತರಲ್ಲಿ ಕೆಲ ಸಿಬ್ಬಂದಿ ಹಣದ ಬೇಡಿಕೆ ಇಡುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಯಾರಾದರೂ ಇಂತಹ ಬೇಡಿಕೆ ಇಟ್ಟಲ್ಲಿ, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ, ಇಂತಹ ಪ್ರಕರಣಗಳ ಕೈಬಿಡುವಂತೆ ಯಾರಾದರೂ ಪ್ರಭಾವಿ ವ್ಯಕ್ತಿಗಳ ಮೂಲಕ ನನ್ನ ಮೇಲೆ ಒತ್ತಡ ಹೇರಲು ಮುಂದಾದರೆ ನಾನು ಯಾವುದಕ್ಕೂ ಜಗ್ಗುವುದಿಲ್ಲ ಎಂದರು.

ಗಂಗಾ ಕಲ್ಯಾಣ ಯೋಜನೆಯಡಿ ನೋಂದಾಯಿತ ಫಲಾನುಭವಿ ರೈತರ ಪಂಪ್‍ಸೇಟ್‍ಗಳಿಗೆ ಯಾವುದೇ ವಿಳಂಬವಿಲ್ಲದೇ 30 ದಿನಗಳಲ್ಲಿ ವಿದ್ಯುತ್ ಪೂರೈಸಬೇಕು. ಇತ್ತೀಚೆಗೆ ತೋಟದ ಮನೆಗಳು ಹೆಚ್ಚಾಗುತ್ತಿದ್ದು, ಆದರೆ ಈ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸವಾಲಾಗಿದೆ. ಪುಟ್ಟ-ಪುಟ್ಟ ಮಕ್ಕಳು, ಜಾನುವಾರುಗಳು ಇಂತಹ ಮನೆಗಳಲಿದ್ದು, ರಾತ್ರಿ ವೇಳೆ ಕತ್ತಲೆಯಲ್ಲಿ ದಿನದೂಡಬೇಕಾಗಿದೆ.

ಇಂತಹ ತೋಟದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವೈಜ್ಞಾನಿಕವಾಗಿ ಕ್ರಮಕೈಗೊಳ್ಳಬೇಕು. ಮೊದಲು ಜಿಲ್ಲೆಯಲ್ಲಿ ತೋಟದ ಮನೆಗಳು ಎಷ್ಟು ಇವೆ ಎಂಬುವುದನ್ನು ಸಮೀಕ್ಷೆ ಮಾಡಬೇಕು. ಬಳಿಕ ಯಾವ ವಿಧಾನದ ಮೂಲಕ ಈ ತೋಟದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬಹುದು ಎಂಬುದರ ಬಗ್ಗೆ ಮೂರು ತಿಂಗಳಲ್ಲಿ ಯೋಜನೆ ರೂಪಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.

ನಿರಂತರವಾಗಿ 7 ತಾಸು ರೈತರ ಪಂಪ್‍ಸೇಟ್‍ಗಳಿಗೆ ವಿದ್ಯುತ್ ಪೂರೈಕೆಯಾಗಬೇಕು. ವಿದ್ಯುತ್ ಪೂರೈಕೆ ಕೇವಲ ದಾಖಲೆಗಳಲ್ಲಿರಬಾರದು, ಅದು ಕಾರ್ಯರೂಪದಲ್ಲಿರಬೇಕು. ಈ ಸಂಬಂಧ ಅಧಿವೇಶನ ಸಂದರ್ಭದಲ್ಲಿ ಎಲ್ಲ ಶಾಸಕರ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದ ಅವರು, ಸಭೆಯಲ್ಲಿ ಶಾಸಕರು ಜಿಲ್ಲೆಯ ವಿದ್ಯುತ್ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರೆ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಜೆಸ್ಕಾಂ ಗ್ರಾಹಕರ ಸಹಾಯವಾಣಿ-1912ಗೆ ಬರುವ ದೂರು ಕರೆಗಳಿಗೆ ಪೂರಕವಾಗಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಕೇವಲ ತಾಂತ್ರಿಕ ಕಾರಣ ನೀಡಿ, ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ ಎಂದು ಖಾರವಾಗಿ ಹೇಳಿದ ಸಚಿವರು, ಈ ಸಂಬಂಧ ತಮಗೆ ನಿತ್ಯ ಕರೆಗಳು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಕರೆಗಳು ಬಾರದಂತೆ ನೋಡಿಕೊಳ್ಳಿ ಎಂದರು.

ಜೆಸ್ಕಾಂ ವ್ಯಾಪ್ತಿಯಲ್ಲಿ 33 ಕೆ.ವಿ.ಯ 54 ವಿದ್ಯುತ್ ಉಪಕೇಂದ್ರ ಸ್ಥಾಪಿಸುತ್ತಿರುವುದು ಉತ್ತಮ ಕಾರ್ಯ. ಆದರೆ, ಕಲಬುರಗಿ ಜಿಲ್ಲೆಗೆ 17 ಉಪಕೇಂದ್ರಗಳನ್ನು ನೀಡಿ, ಇನ್ನಿತರ ಜಿಲ್ಲೆಗಳನ್ನು ಕಡೆಗಣಿಸಲಾಗುತ್ತಿದೆ. ಜೆಸ್ಕಾಂ ವ್ಯಾಪ್ತಿಯ ರಾಯಚೂರ ಜಿಲ್ಲೆಗೆ ಒಂದೂ ಉಪಕೇಂದ್ರವನ್ನೂ ಮಂಜೂರು ಮಾಡದಿರುವ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೇವಲ ಕಲಬುರಗಿಗೆ ಪ್ರಾಧಾನ್ಯತೆ ನೀಡಬಾರದು. ಇತರ ಜಿಲ್ಲೆಗಳನ್ನೂ ಸಮನಾಗಿ ಪರಿಗಣಿಸಬೇಕು. ಜಿಲ್ಲೆಯ ಹಲವು ಗ್ರಾಮೀಣ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಹೀಗಾಗಿ ಕತ್ತಲೆಯಲ್ಲಿರುವ ಹಲವು ಕುಟುಂಬಳಿಗೆ ರಾಜ್ಯ ಸರ್ಕಾರದ ಬೆಳಕು ಯೋಜನೆ ತಲುಪಿಸಿ, 100 ದಿನಗಳೊಳಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದ ಅವರು, ಈ ಸಂಬಂಧ ಗ್ರಾಮ ಪಂಚಾಯಿತಿಯಿಂದ ಗ್ರಾಹಕರು ನಿರಾಪೇಕ್ಷಣಾ ಪತ್ರ ಪಡೆಯುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕುಡಿಯುವ ನೀರಿನ ಉದ್ದೇಶಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿದ್ಯುತ್ ಸಂಪರ್ಕ ಕೋರಿ ಸಲ್ಲಿಸುವ ಪ್ರಸ್ತಾವನೆಗಳಿಗೆ ಆಯಾ ವರ್ಷದ ಬೇಸಿಗೆ ಕಾಲದಲ್ಲಿ ಸಮಸ್ಯೆಯಾಗದಂತೆ, ಜನವರಿ ಮಾಹೆಯಲ್ಲಿಯೇ ಸಂಪರ್ಕ ಕಲ್ಪಿಸಬೇಕು.

ಇದೇ ತಿಂಗಳ 24ರ ನಂತರ ಮತ್ತೇ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದು, ಆ ಸಂದರ್ಭದಲ್ಲಿ ರೈತರು, ಗ್ರಾಹಕರಿಂದ ಯಾವುದೇ ದೂರ ಬರದಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು. ಬಳಿಕ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕೆಳ ಹಂತದ ಅಧಿಕಾರಿಗಳು ಇದೇ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ರಿಚಾರ್ಜ್ ಘಟಕಗಳ ಸ್ಥಾಪನೆ: ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ರಿಚಾರ್ಜ್ ಸೆಂಟರ್‌ಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.

ರಾಜ್ಯದಲ್ಲಿ ಒಟ್ಟು 500 ಘಟಕಗಳ ಸ್ಥಾಪನೆಗೆ ಚಿಂತನೆ ನಡೆದಿದೆ. ಕಲ್ಯಾಣ ಕರ್ನಾಟಕ ಎಂಬ ಮಾತು ಕೇವಲ ಭಾಷಣದ ವಸ್ತುವಾಗದಂತೆ ನಿಜವಾಗಲೂ ಕಲ್ಯಾಣವನ್ನು ಮಾಡುವುದನ್ನು ಕಾರ್ಯರೂಪಕ್ಕೆ ತರಲು ಎಲ್ಲ ಅಧಿಕಾರಿಗಳು ಜೊತೆಗೂಡಿ ಶ್ರಮಿಸಬೇಕು ಎಂದು ತಿಳಿಹೇಳಿದರು.

ಶಾಸಕ ಬಸವರಾಜ ಮತ್ತಿಮಡು, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯ್ಕ್, ಕೆಪಿಟಿಸಿಎಲ್‍ನ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ, ಪ್ರಾದೇಶಿಕ ಆಯುಕ್ತರಾದ ಡಾ.ಎನ್.ವಿ.ಪ್ರಸಾದ, ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ, ಇಂಧನ ಇಲಾಖೆಯ ಜಂಟಿ ನಿರ್ದೇಶಕ ಕೆ.ಪರಮೇಶ್ ಮತ್ತು ಜೆಸ್ಕಾಂನ ವ್ಯಾಪ್ತಿಯ ಜಿಲ್ಲೆಗಳ ಅಧಿಕಾರಿಗಳು ಇದ್ದರು.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...