ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಅಪಘಾತವಾದ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕರು ಚಾಲಕರಿಗೆ ಜಾಮೀನು ನೀಡುವ ವ್ಯವಸ್ಥೆಯನ್ನು ಮಾಡಬೇಕಿರುವುದು ನಿಮ್ಮ ಕರ್ತವ್ಯ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
ಸಾರಿಗೆ ಬಸ್‌ಗಳು ಅಪಘಾತವಾದ ವೇಳೆ ಘಟಕ ವ್ಯವಸ್ಥಾಪಕರು ಚಾಲಕರಿಗೆ ಜಾಮೀನು ನೀಡಬೇಕು. ಆದರೆ, ಅವರು ಆ ರೀತಿ ಮಾಡುತ್ತಿಲ್ಲ ಎಂದು ಹಲವಾರು ದೂರುಗಳು ಚಾಲಕರಿಂದ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕರು ಮತ್ತೊಮ್ಮೆ ಘಟಕ ವ್ಯವಸ್ಥಾಪಕರಿಗೆ ಈ ಸೂಚನೆ ನೀಡಿದ್ದಾರೆ.
2012, 2013 ಮತ್ತು 2014ನೇ ಇಸವಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಒಟ್ಟು ನಾಲ್ಕು ವಾಹನಗಳ ಅಪಘಾತ ಸಂಭವಿಸಿದ್ದ ಪ್ರಕರಣಗಳಲ್ಲಿ ಅಂದು ಕರ್ತವ್ಯದಲ್ಲಿದ್ದ ಚಾಲಕರಿಗೆ ಸಂಬಂಧಿಸಿದ ಘಟಕ ವ್ಯವಸ್ಥಾಪಕರು ಜಾಮೀನು ನೀಡದೆ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದರು.
ಈ ಕುರಿತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಘಟಕ ವ್ಯವಸ್ಥಾಪಕರಿಗೆ ತಮ್ಮ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಿ ಎಂದು ಇತ್ತೀಚೆಗೆ ಸೂಚನೆ ನೀಡಿದ್ದಾರೆ.
ಸಂಸ್ಥೆಯ ಬಸ್‌ಗಳ ಅಪಘಾತ ಸಂಭವಿಸಿದ್ದರೆ ಕರ್ತವ್ಯದ ಆ ಸಂದರ್ಭದಲ್ಲಿ ಅಪಘಾತ ಪ್ರಕರಣಗಳಡಿ ಸಂಸ್ಥೆಯ ಸಿಬ್ಬಂದಿ (ಚಾಲಕರು) ಪೊಲೀಸ್ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾದರೆ, ಕರ್ತವ್ಯದಲ್ಲಿರುವಾಗ ಆಗುವ ಅಪರಾಧಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸಮನ್ಸ್ ಬಂದರೆ,
ಘಟಕದ ಮುಖ್ಯಸ್ಥರು (ಯುನಿಟೆಡ್ ಹೆಡ್) ಅಥವಾ ಅವರಿಂದ ಅಧಿಕಾರ ಹೊಂದಲ್ಪಟ್ಟ ಅಧಿಕಾರಿಗಳು ತಮ್ಮ ಅಧಿಕೃತ ಸಾಮರ್ಥ್ಯದಲ್ಲಿ (ಅಫೀಸಿಯಲ್ ಕೆಪಾಸಿಟಿ) ಆ ಸಿಬ್ಬಂದಿಗೆ ಜಾಮೀನು ನೀಡಲು ಹಾಗೂ ಆ ವೇಳೆ ಜಾಮೀನು ಪಡೆಯಲು ಹಣ ಜಮಾ ಮಾಡಬೇಕಾದ ಸಂದರ್ಭದಲ್ಲಿ ಹಣ ಪಾವತಿಗೆ ಅನುಮತಿ ನೀಡಲು ಈಗಾಗಲೇ ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ .
ಆದಾಗ್ಯೂ ಪ್ರಸ್ತುತ ಅಪಘಾತ ಪ್ರಕರಣಗಳಲ್ಲಿ ಘಟಕ ವ್ಯವಸ್ಥಾಪಕರು ಚಾಲಕರಿಗೆ ಜಾಮೀನು ನೀಡುವ ವ್ಯವಸ್ಥೆಯನ್ನು ಮಾಡದೆ ಇರುವ ಕುರಿತು ಪದೇಪದೇ ದೂರುಗಳು ಬರುತ್ತಿರುವುದರಿಂದ ಸಂಬಂಧಪಟ್ಟ ವಲಯ ಅಧಿಕಾರಿಗಳು/ ಘಟಕ ವ್ಯವಸ್ಥಾಪಕರು ಇಂತಹ ದೂರುಗಳಿಗೆ ಅವಕಾಶ ಕೊಡದಂತೆ ಸೂಕ್ತ ಕ್ರಮ ಕೈಗೊಳ್ಳಲು ಮತ್ತೊಮ್ಮೆ ಸೂಚಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.