ಬೆಂಗಳೂರು: ಮಹದೇವಪುರ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿಯ ವತಿಯಿಂದ ನೂರಾರು ಕಾರ್ಯಕರ್ತರು ಆಟೋ ರ‍್ಯಾಲಿ ನಡೆಸುವುದರ ಮೂಲಕ ಬೆಲೆ ಏರಿಕೆ ವಿರುದ್ಧ ಇಂದು (ಸೆ.19) ಪ್ರತಿಭಟನೆ ನಡೆಸಿದರು.
ಕ್ಷೇತ್ರದ ಎಎಪಿ ಅಧ್ಯಕ್ಷ ಅಶೋಕ್ ಮೃತ್ಯುಂಜಯ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಶೇ.60ಕ್ಕೂ ಹೆಚ್ಚು ಪೆಟ್ರೋಲ್, ಡೀಸೆಲ್ ಹಾಗೂ ತೈಲ ಬೆಲೆಗಳ ಮೇಲೆ ಎಕ್ಸೈಸ್ ಸುಂಕ, ವ್ಯಾಟ್ ಸುಂಕ ಹಾಗೂ ಇನ್ನಿತರ ಸೆಸ್ ಗಳನ್ನು ವಿಧಿಸುವುದರ ಮೂಲಕ ದೇಶದ ಎಲ್ಲ ಪ್ರಜೆಗಳ ಜೇಬಿಗೆ ಕನ್ನ ಹಾಕುವ ಕೆಲಸಗಳನ್ನು ಮಾಡುತ್ತಿರುವುದು ಖಂಡನೀಯ ಎಂದರು.
ಅಂತಾರಾಷ್ಟ್ರೀಯ ಮಾರುಕಟ್ಟೆ, ಡಾಲರ್ ವಿನಿಮಯ ದರ ಮುಂತಾದ ಅವಾಸ್ತವಿಕ ವಿಚಾರಗಳನ್ನು ಹೇಳುವುದರ ಮೂಲಕ ರಾಜ್ಯ ಹಾಗೂ ದೇಶದ ಪ್ರಜೆಗಳ ದಿಕ್ಕನ್ನು ತಪ್ಪಿಸಿ ಬೆಲೆ ಏರಿಸಿ ಜನತೆಯ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದರು.
ಇತ್ತೀಚೆಗೆ ವಿಧಾನ ಸಭೆಯಲ್ಲೂ ಸಹ ಪುಂಖಾನುಪುಂಕವಾಗಿ ಈ ಬಗ್ಗೆ ಚರ್ಚೆ ನಡೆದರೂ ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರ ಇದುವರೆವಿಗೂ ಯಾವುದೇ ತೆರಿಗೆಯನ್ನು ಇಳಿಸುತ್ತಿಲ್ಲ. ಈ ಕೂಡಲೇ ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನು ಇಳಿಸದಿದ್ದರೆ ಆಮ್ ಆದ್ಮಿ ಪಾರ್ಟಿ ಕರ್ನಾಟಕ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.