CrimeNEWSರಾಜಕೀಯ

ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ ಮೊಂಬತ್ತಿ ಹಚ್ಚಿ ಎಎಪಿ ಪ್ರತಿಭಟನೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯಾದ್ಯಂತ ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದನ್ನು ಖಂಡಿಸಿ ಆಮ್‌ ಆದ್ಮಿ ಪಾರ್ಟಿಯು ಶುಕ್ರವಾರ ಸಂಜೆ ಮೊಂಬತ್ತಿ ಹಚ್ಚಿ ಪ್ರತಿಭಟನೆ ನಡೆಸಿತು.

ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಎಪಿಯ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷರಾದ ಕುಶಲಾ ಸ್ವಾಮಿ, “ಗೃಹ ಸಚಿವರಾಗಿದ್ದವರು ಮುಖ್ಯಮಂತ್ರಿಯಾಗಿದ್ದರೂ ರಾಜ್ಯದಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವುದು ಆಘಾತಕಾರಿ ಎಂದು ಹೇಳಿದರು.

ತಿಂಗಳಿಗೆ ಸರಾಸರಿ 42 ಮಹಿಳೆಯರ ಮೇಲೆ, ಅಂದರೆ ಪ್ರತಿದಿನ ಒಂದಕ್ಕಿಂತ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಆಗುತ್ತಿದೆ. 2018ರಿಂದ ಈವರೆಗೆ 1759 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಕೇವಲ ಆರು ಮಂದಿಗೆ ಶಿಕ್ಷೆಯಾಗಿದೆ ಎಂದು ಪೊಲೀಸ್‌ ಇಲಾಖೆಯೇ ಮಾಹಿತಿ ಬಹಿರಂಗಪಡಿಸಿದೆ. ಸಾಕ್ಷ್ಯಾಧಾರ ಸಂಗ್ರಹಿಸಲು ಪೊಲೀಸರು ನಿರ್ಲಕ್ಷ್ಯ ತೋರುತ್ತಿರುವುದರಿಂದ ಅತ್ಯಾಚಾರಿಗಳು ಖುಲಾಸೆಗೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರಿಗೆ ದೂರು ನೀಡಲು ಬರುವ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಪೊಲೀಸರು ಎಫ್‌ಐಆರ್‌ ಹಾಕಲು ಮೀನಾಮೇಷ ಎಣಿಸುತ್ತಾರೆ. ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲೂ ರಾಜಿ ಮಾಡಿಸಲು ಪೊಲೀಸರು ಮುಂದಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.

ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಾಧ್ಯಮಗಳ ಮುಂದೆ ಹೇಳಿಕೆಗಷ್ಟೇ ಸೀಮಿತವಾಗಿದ್ದು, ಪೊಲೀಸ್‌ ಇಲಾಖೆ ಮೇಲೆ ಹಿಡಿತ ಸಾಧಿಸುವುದರಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯದ ಆಡಳಿತ ಪಕ್ಷದಲ್ಲಿ ಕಾಮುಕರೇ ತುಂಬಿಕೊಂಡಿದ್ದು, ಅವರಿಗೆ ಮಹಿಳೆಯರ ಮಾನರಕ್ಷಣೆಗಿಂತ ತಮ್ಮ ಮಾನ ಉಳಿದರೆ ಸಾಕಾಗಿದೆ. ಅತ್ಯಾಚಾರಿಗಳ ವಿರುದ್ಧ ಮಾತನಾಡುವ ನೈತಿಕತೆಯನ್ನೇ ಬಿಜೆಪಿ ನಾಯಕರು ಕಳೆದುಕೊಂಡಿದ್ದಾರೆ ಎಂದು ಕುಶಲಾ ಸ್ವಾಮಿ ಕಿಡಿಕಾರಿದರು.

ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಬಳಕೆಯಾಗುತ್ತಿದ್ದ 71 ಸಾಂತ್ವನ ಕೇಂದ್ರಗಳನ್ನು ಏಪ್ರಿಲ್‌ನಲ್ಲಿ ಸ್ಥಗಿತಗೊಳಿಸಲಾಗಿದೆ. ಜನಸಂಖ್ಯೆ ಜಾಸ್ತಿಯಿರುವ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳ ಹೆಚ್ಚು ದಾಖಲಾಗುವ ಬೆಂಗಳೂರಿನಲ್ಲೇ ಎಲ್ಲ ಸಾಂತ್ವನ ಕೇಂದ್ರಗಳು ಸ್ಥಗಿತಗೊಂಡಿವೆ.

ಕೇಂದ್ರ ಸರ್ಕಾರದ ಯೋಜನೆಯ ಕೌಟುಂಬಿಕ ಸಲಹಾ ಕೇಂದ್ರಗಳು ನಿರುಪಯೋಗಿಯಾಗಿದ್ದು, ನೊಂದ ಮಹಿಳೆಯರಿಗೆ ಅಗತ್ಯವಿರುವ ಯಾವ ಸೇವೆಯೂ ಅಲ್ಲಿಲ್ಲ. ಮಹಿಳೆಯರ ಬಗ್ಗೆ ಕಾಳಜಿಯಿಲ್ಲದ ಹಾಗೂ ಬಿಜೆಪಿಯ ಏಜೆಂಟ್‌ ರೀತಿ ವರ್ತಿಸುವ ಆರ್.ಪ್ರಮೀಳಾ ನಾಯ್ಡು ಅವರ ನೇತೃತ್ವದಲ್ಲಿ ರಾಜ್ಯ ಮಹಿಳಾ ಆಯೋಗ ನಿಷ್ಕ್ರಿಯವಾಗಿದೆ ಎಂದು ಕುಶಲಾ ಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಎಎಪಿ ಮುಖಂಡರಾದ ಸುಹಾಸಿನಿ ಫಣಿರಾಜ್‌, ಯೋಗಿತಾ ರೆಡ್ಡಿ, ವಿಜಯ್‌ ಶಾಸ್ತ್ರಿಮಠ್‌ ಹಾಗೂ ಅನೇಕ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ