ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ನಿರಂತರ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ – ಅತ್ಯಾಚಾರ ಪ್ರಕರಣಗಳಿಗೆ ನ್ಯಾಯ ದೊರಕಿಸಿಕೊಡುವ ದಿಶೆಯಲ್ಲಿ ರಾಜ್ಯ ಮಹಿಳಾ ಆಯೋಗ ಕೈಚೆಲ್ಲಿ ಕುಳಿತಿದೆ ಎಂದು ಆರೋಪಿಸಿ ನಾಳೆ (ಸೆ.28) ಕಚೇರಿಗೆ ಮುತ್ತಿಗೆ ಹಾಗೂ ಬೀಗ ಜಡಿಯುವ ಕಾರ್ಯಕ್ರಮವನ್ನು ಎಎಪಿ ಹಮ್ಮಿಕೊಂಡಿದೆ.
ರಾಜ್ಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ನಿರಂತರ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಕೂಡ ಸಂಪೂರ್ಣ ವೈಫಲ್ಯ ಗೊಂಡಿದೆ. ಇನ್ನು ಈ ಬಗ್ಗೆ ರಾಜ್ಯ ಮಹಿಳಾ ಆಯೋಗವೂ ಸಹ ನಿಷ್ಕ್ರಿಯಗೊಂಡಿದ್ದು ಸಂಪೂರ್ಣ ವೈಫಲ್ಯಗೊಂಡಿದೆ. ರಾಜ್ಯದಲ್ಲಿ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವ ದಿಶೆಯಲ್ಲಿ ಕೈಚೆಲ್ಲಿ ಕುಳಿತಿದೆ ಎಂದು ಆರೋಪಿಸಿದೆ.
ಹೀಗಾಗಿ ರಾಜ್ಯದಲ್ಲಿ ಮಹಿಳಾ ಆಯೋಗದ ಪ್ರಸ್ತುತೆಯ ಪ್ರಶ್ನೆಯೂ ಮೂಡಿದೆ. ಈ ದಿಶೆಯಲ್ಲಿ ಆಮ್ ಆದ್ಮಿ ಪಕ್ಷದ ಬೆಂಗಳೂರು ಮಹಿಳಾ ಘಟಕದ ವತಿಯಿಂದ ರಾಜ್ಯ ಮಹಿಳಾ ಆಯೋಗದ ಕಚೇರಿಗೆ ಮುತ್ತಿಗೆ ಹಾಗೂ ಬೀಗ ಜಡಿಯುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳುವ ಮೂಲಕ ಎಚ್ಚರಿಕೆಯ ಸಂದೇಶವನ್ನು ನೀಡುವ ವಿಭಿನ್ನ ಪ್ರತಿಭಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನಾಳೆ (ಮಂಗಳವಾರ) ಬೆಳಗ್ಗೆ 11 ಗಂಟೆಗೆ ಮೈಸೂರು ಬ್ಯಾಂಕ್ ವೃತ್ತದಿಂದ ಆರಂಭ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಕಚೇರಿ ತಲುಪಿ ಪ್ರತಿಭಟನಾ ಧರಣಿ ಮಾಡುವ ಮೂಲಕ ಬಿಗ ಜಡಿಯಲಾಗುವುದು ಎಂದು ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಕುಶಲಾ ಸ್ವಾಮಿ ತಿಳಿಸಿದ್ದಾರೆ.