ವಿಧವೆಯ ಮಾತನ್ನು ಕೇಳುತ್ತಲೇ ಸಿರಿವಂತನ ಕಣ್ಣು ತೆರೆಯಿತು!
ಒಂದೂ ಊರಿನಲ್ಲಿ ಒಬ್ಬ ಸಿರಿವಂತನು ಒಂದು ದೊಡ್ಡ ಮನೆ ಕಟ್ಟಿಸಿದ.
ಮನೆಯ ಮೇಲೆ ಹೋಗಿ ನಿಂತು ನೋಡಿದ. ಇಂಥ ಮನೆ ಇನ್ನೆಲ್ಲಿಯೂ ಇಲ್ಲ ಎಂದು ಬೀಗಿದ.
ಆಕಸ್ಮಾತ್ ಆತನಿಗೆ ತನ್ನ ಮನೆಯ ಪಕ್ಕದಲ್ಲಿದ್ದ ಗುಡಿಸಲು ಕಂಡಿತು. ತಕ್ಷಣ- “ಈ ಗುಡಿಸಲು ನನ್ನ ಮನೆಗೆ ಶೋಭೆಯಲ್ಲ!” ಎಂದು ನಿರ್ಧರಿಸಿದ. ಕೆಳಗಿಳಿದು ಬಂದ.
ಆ ಗುಡಿಸಲಿನಲ್ಲಿ ಒಬ್ಬ ವಿಧವೆ ಇದ್ದಳು. ಅವಳಿಗೆ ತುಂಬಾ ವಯಸ್ಸಾಗಿತ್ತು. ಇರುವ ಒಬ್ಬ ಮಗನೂ ಗತಿಸಿ ಹೋಗಿದ್ದ. ಕೂಲಿ ನಾಲಿ ಮಾಡಿ ನೆಮ್ಮದಿಯಿಂದ ಇದ್ದಳು.
ಸಿರಿವಂತನು ಅವಳಿಗೆ ಹೇಳಿದ- “ನೀನು ಕೇಳಿದಷ್ಟು ಹಣ ಕೊಡುತ್ತೇನೆ. ಈಗಿಂದೀಗ ನೀನು ಈ ಗುಡಿಸಲನ್ನು ಬಿಟ್ಟು ಹೋಗಬೇಕು!” “ಏಕೆ?” ಎಂದು ವಿಧವೆ ಕೇಳಿದಳು.
“ನನ್ನ ಭವ್ಯ ಮನೆಯ ಪಕ್ಕದಲ್ಲಿ ನಿನ್ನ ಗುಡಿಸಲು ಇರುವುದು ಯೋಗ್ಯವಲ್ಲ. ಇದು ನಿನಗೆ ತಿಳಿಯದೇ?” ಎಂದ ಸಿರಿವಂತ. ವಿಧವೆ ಹೇಳಿದಳು “ಇದು ಬರೀ ಮನೆಯಲ್ಲ. ನನ್ನ ಮುದ್ದು ಮಗುವಿನ, ಪ್ರೀತಿಯ ಪತಿಯ ಸವಿ ನೆನಪಿನ ನಿಲಯ, ಅಮೂಲ್ಯ , ನಾನೆಂದಿಗೂ ಇದನ್ನು ಅಗಲಿ ಇರಲಾರೆ.
ಅದು ಇರಲಿ ಸಿರಿವಂತರೆ, ನಿಮ್ಮ ಮನೆ ನನಗೆ ಹೂವಾಗಿ ಕಂಡಿತು. ನನ್ನ ಮನೆ ನಿಮಗೇಕೆ ಮುಳ್ಳಾಯಿತು!” ವಿಧವೆಯ ಮಾತನ್ನು ಕೇಳುತ್ತಲೇ ಸಿರಿವಂತನ ಕಣ್ಣು ತೆರೆಯಿತು! ಅಹಂಕಾರ ಅಳಿಯಿತು!!.
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ