- ಕೆಲವರಿಗೆ ವೇತನ ಹೆಚ್ಚಳದಿಂದ ಸಂತಸ ; ಸರ್ಕಾರದೊಂದಿಗೆ ನಿಗಮ ವಿಲೀನ ಆಗಲೇ ಬೇಕೆಂಬ ಪಟ್ಟು ಇನ್ನು ಕೆಲವರದು
ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್‌ಆರ್‌ಟಿಸಿ) ನೌಕರರಿಗೆ ರಾಜ್ಯ ಸರ್ಕಾರ ವೇತನ ಹೆಚ್ಚಳ ಘೋಷಿಸಿದ ಒಂದು ದಿನದ ನಂತರ, ರಾಜ್ಯ ಸಾರಿಗೆ (ಎಸ್‌ಟಿ) ನೌಕರರ ಮುಷ್ಕರದ ನೇತೃತ್ವ ವಹಿಸಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರಾದ ಗೋಪಿಚಂದ್ ಪಡಲ್ಕರ್ ಮತ್ತು ಖೋಟ್ ಅವರು ಮುಷ್ಕರವನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಆದರೂ ಕೂಡ ನೌಕರರು ರಾಜ್ಯ ಸರ್ಕಾರದೊಂದಿಗೆ ನಿಗಮದ ವಿಲೀನದ ಕುರಿತ ತಮ್ಮ ಬೇಡಿಕೆ ಈಡೇರುವವರೆಗೆ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳುತ್ತಿದ್ದು, ಎಸ್‌ಟಿ ಕಾರ್ಮಿಕರ ಒಂದು ವಿಭಾಗವು ಆಜಾದ್ ಮೈದಾನದಲ್ಲಿ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವ ನಿರೀಕ್ಷೆಯಿದೆ.
ಕಳೆದ 29 ದಿನಗಳಿಂದ ಮುಷ್ಕರ ನಡೆಸುತ್ತಿರುವ ರಾಜ್ಯ ಸಾರಿಗೆ ಸಂಸ್ಥೆಯ ನೌಕರರಿಗೆ ₹7,200 ರಿಂದ ₹3,600 ರವರೆಗೆ ವೇತನ ಹೆಚ್ಚಳ ಮಾಡುವುದಾಗಿ ರಾಜ್ಯ ಸರ್ಕಾರ ಬುಧವಾರ ಪ್ರಕಟಿಸಿದೆ. ಎಸ್ಟಿ ಕಾರ್ಮಿಕರ ನೇತೃತ್ವ ವಹಿಸಿದ್ದ ಪಡಲ್ಕರ್ ಮತ್ತು ಖೋಟ್ ಅವರು ಬುಧವಾರ ತಮ್ಮ ನಿರ್ಧಾರವನ್ನು ಮುಂದೂಡಿದರು ಮತ್ತು ಆಜಾದ್ ಮೈದಾನದಲ್ಲಿ ಮೊಕ್ಕಾಂ ಹೂಡಿದ್ದ ಎಸ್ಟಿ ಕಾರ್ಮಿಕರೊಂದಿಗೆ ಚರ್ಚಿಸಲು ಹೆಚ್ಚಿನ ಸಮಯ ಕೋರಿದ್ದರು.
ತಡರಾತ್ರಿಯವರೆಗೂ ಆಜಾದ್ ಮೈದಾನದಲ್ಲಿ ಶಾಸಕರು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಆದರೆ, ಕಾರ್ಯಕರ್ತರಲ್ಲಿ ಒಮ್ಮತ ಮೂಡಿಲ್ಲ. ಕೆಲವರು ವೇತನ ಹೆಚ್ಚಳದಿಂದ ಸಂತಸ ವ್ಯಕ್ತಪಡಿಸಿದರೆ, ಇನ್ನು ಕೆಲವರು ನಿಗಮವನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನ ಮಾಡುವವರೆಗೂ ಧರಣಿ ಮುಂದುವರಿಸಲು ಮುಂದಾಗಿದ್ದಾರೆ.
“ನಾವು ಆಜಾದ್ ಮೈದಾನದಲ್ಲಿ ಕಾರ್ಮಿಕರನ್ನು ಭೇಟಿ ಮಾಡಿದ್ದೇವೆ ಮತ್ತು ಸರ್ಕಾರದೊಂದಿಗೆ ಅಂತಿಮ ಸಭೆಯ ನಂತರ ನಾವು ಒಂದು ನಿಲುವು ತೆಗೆದುಕೊಳ್ಳಬೇಕು ಎಂದು ಹೇಳಿದ್ದೇವೆ. ಮುಷ್ಕರವನ್ನು ಹಿಂಪಡೆಯುತ್ತಿದ್ದೇವೆ. ನಾವು ಮುಷ್ಕರ ನಿರತ ನೌಕರರು ಅಂತ್ಯಗೊಳಿಸಲು ಒತ್ತಾಯಿಸಲು ಸಾಧ್ಯವಿಲ್ಲದ ಕಾರಣ ಅವರು ತಮ್ಮ ನಿಲುವಿಗೆ ಬದ್ದರಾಗೆ ಉಳಿಯಬಹುದು. ಯಾರೇ ಮುಷ್ಕರ ಮುಂದುವರಿಸಲು ಬಯಸಿದರೂ ನಾವು ವಿರೋಧಿಸುವುದಿಲ್ಲ ಎಂದು ಪಡಲ್ಕರ್ ಗುರುವಾರ ಹೇಳಿದ್ದಾರೆ.
ಏತನ್ಮಧ್ಯೆ, ಕಾರ್ಮಿಕರು ವೇತನ ಹೆಚ್ಚಳವನ್ನು ತಮ್ಮ ವಿಜಯವೆಂದು ಸ್ವೀಕರಿಸಬೇಕು ಮತ್ತು ಮುಂದಿನ “ಯುದ್ಧ” ಕ್ಕೆ ಸಿದ್ಧರಾಗಬೇಕು ಎಂದು ಖೋಟ್ ಹೇಳಿದರು. “ನಾವು ತಕ್ಷಣ ನಮ್ಮ ನಿರ್ಧಾರವನ್ನು ಪ್ರಕಟಿಸಲಿಲ್ಲ. ಒಂದು ರಾತ್ರಿ ಆಜಾದ್ ಮೈದಾನದಲ್ಲಿ ಕಾರ್ಮಿಕರೊಂದಿಗೆ ಚರ್ಚಿಸಿದೆವು. ನಾವು ಇನ್ನೂ ಕಾರ್ಮಿಕರೊಂದಿಗೆ ಇದ್ದೇವೆ ಎಂದು ಹೇಳಿದರು.
ಇನ್ನು ಮುಷ್ಕರ ನಡೆಸುತ್ತಿರುವ ಕಾರ್ಮಿಕರು ಕೆಲಸಕ್ಕೆ ಮರಳುವಂತೆ ಸಾರಿಗೆ ಸಚಿವ ಅನಿಲ್ ಪರಬ್ ಮನವಿ ಮಾಡಿದ್ದಾರೆ. ವಿಲೀನಕ್ಕಾಗಿ ತಮ್ಮ ಬೇಡಿಕೆಯು ಪ್ರಾಥಮಿಕವಾಗಿ ವೇತನವನ್ನು ಸಕಾಲಿಕವಾಗಿ ಪಾವತಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ವೇತನ ಹೆಚ್ಚಳವನ್ನು ಖಚಿತಪಡಿಸಿಕೊಳ್ಳುವುದಾಗಿದೆ ಎಂದು ಹೇಳಿದರು.
ಇದನ್ನು ಸರ್ಕಾರವು ಈಗಾಗಲೇ ಮಾಡಿದೆ. “ನನ್ನ ಪ್ರಕಾರ, ಅವರು ಈಗ ‘ವಿಲೀನ’ ಎಂಬ ಪದಕ್ಕೆ ಅಂಟಿಕೊಳ್ಳಬಾರದು. ನಾವು ಅವರಿಗೆ ಹೆಚ್ಚಳವನ್ನು ನೀಡಿದ್ದೇವೆ ಮತ್ತು ಪ್ರತಿ ತಿಂಗಳು ಸಕಾಲಿಕ ವೇತನವನ್ನು ಭರವಸೆ ನೀಡಿದ್ದೇವೆ. ವಿಲೀನದ ಬಗ್ಗೆ, ಅವರು ನ್ಯಾಯಾಲಯ ನೇಮಿಸಿದ ಸಮಿತಿಯೊಂದಿಗೆ ಮಾತನಾಡಬಹುದು ಎಂದು ಪರಬ್ ಗುರುವಾರ ಹೇಳಿದರು.
ಸರ್ಕಾರದ ಈಗಿನ ನಿಲುವನ್ನು ಸ್ವೀಕರಿಸದಿರಲು ಕಾರ್ಮಿಕರಿಗೆ ಹಕ್ಕಿದೆ ಮತ್ತು ಇದು ಕಾರ್ಮಿಕರ ಸ್ವಯಂಪ್ರೇರಿತ ಮುಷ್ಕರವಾಗಿರುವುದರಿಂದ ಕಾರ್ಮಿಕರನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಪಡಲ್ಕರ್ ಹೇಳಿದರು.