ನ್ಯೂಡೆಲ್ಲಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರವನ್ನು ಕುಮಾರಸ್ವಾಮಿ, ಯಡಿಯೂರಪ್ಪ ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ಪರಿಷತ್ ಚುನಾವಣೆಯ ಬಗ್ಗೆ ಮೋದಿಯವರ ಬಳಿ ಚರ್ಚೆ ಮಾಡಿದ್ದೇನೆ. ಗೊಂದಲವಾಗದಂತೆ ನಿರ್ಧಾರ ಮಾಡಿ ಎಂದು ಹೇಳಿದ್ದೇನೆ. ಬಿಜೆಪಿಯವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡೋಣ ಎಂದರು.
ಆದರೆ, ಮುಂದಿನ ಚುನಾವಣೆಗೆ ಬಿಜೆಪಿ-ಜೆಡಿಎಸ್ ಇದೇ ಮೈತ್ರಿ ಮುಂದುವರಿಯುವ ಬಗ್ಗೆ ಚರ್ಚೆ ನಡೆದಿಲ್ಲ. ಮಲ್ಲಿಕಾರ್ಜುನ ಖರ್ಗೆಯವರಿಗೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಮನಸ್ಸು ಇದೆ. ಆದರೆ ಈ ಮನಸ್ಸು ಬೇರೆ ನಾಯಕರಿಗೆ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಏನಿದೆಯೋ ಗೊತ್ತಿಲ್ಲ ಎಂದರು.
ನಾವು ಮೇಲೆ ಬಿದ್ದು ಮೈತ್ರಿ ಮಾಡಿಕೊಳ್ಳಿ ಎಂದು ಹೇಳಲು ಆಗಲ್ಲ. ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಕುಮಾರಸ್ವಾಮಿ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಸತ್ತಿನಲ್ಲಿ ಭಾರತದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿಮಾಡಿ ಉಭಯರ ನಡುವಿನ ಕೆಲರಾಜಕೀಯ ವಿದ್ಯಾಮಾನಗಳ ಬಗ್ಗೆ ಸಭೆ ನಡೆಸಿದ್ದಾಗಿ ಮೋದಿ ಅವರು ತಿಳಿಸಿದ್ದಾರೆ.
ನವೆಂಬರ್ 29 ರಂದು ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನದ ಎರಡನೇ ದಿನದಂದು ಇಂದು “ನಮ್ಮ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಜೀ ಅವರೊಂದಿಗೆ ಸಂಸತ್ತಿನಲ್ಲಿ ಉತ್ತಮ ಸಭೆ ನಡೆಸಿದ್ದೇವೆ” ಎಂದು ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
Had a great meeting with our former PM Shri @H_D_Devegowda Ji in Parliament today. pic.twitter.com/89is38aUYn
— Narendra Modi (@narendramodi) November 30, 2021