ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳವನ್ನು ರಾಜ್ಯ ಉಚ್ಚ ನ್ಯಾಯಾಲಯ ರದ್ದುಪಡಿಸಿ ತೀರ್ಪು ನೀಡಿದ ನಂತರ ಭ್ರಷ್ಟಾಚಾರ ನಿಗ್ರಹ ದಳ ಮತ್ತು ಲೋಕಾಯುಕ್ತ ಸಂಸ್ಥೆಗಳಲ್ಲಿ ದೂರುಗಳು ದಾಖಲಾಗುತ್ತಿಲ್ಲ. ಒಮ್ಮೆ ದೂರು ಸ್ವೀಕರಿಸಿದರೂ ಕೂಡ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.
ಇದಕ್ಕೆ ಪ್ರಮುಖ ಕಾರಣ ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ಇನ್ನೂ ಶಕ್ತಿ ನೀಡದಿರುವುದು. ಹೌದು ! ಸರ್ಕಾರ ಬಲ ತುಂಬುವ ಬಗ್ಗೆ ಬಾಯಿ ಮಾತಿನ ಹೇಳಿಕೆ ನೀಡುತ್ತಿದೆಯೇ ಹೊರತು ಕಾರ್ಯರೂಪಕ್ಕೆ ತರುವುದಕ್ಕೆ ಆಸಕ್ತಿಯನ್ನು ತೋರುತ್ತಿಲ್ಲ. ಇದರಿಂದ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳ ವಿರುದ್ಧ ಯಾರಿಗೆ ದೂರು ನೀಡುವುದು ಎಂಬ ಜಿಜ್ಞಾಸೆ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಭ್ರಷ್ಟಾಚಾರ ನಿಗ್ರಹ ದಳವನ್ನು ರಾಜ್ಯ ಉಚ್ಚ ನ್ಯಾಯಾಲಯ ರದ್ದುಪಡಿಸಿ ಹನ್ನೆರಡು ದಿನಗಳಾಗಿದೆ. ಆದರೂ ರಾಜ್ಯ ಸರ್ಕಾರ ಇನ್ನೂ ಸ್ಪಷ್ಟ ನಿರ್ದೇಶನ ಹೊರಡಿಸಿಲ್ಲ. ಇದರಿಂದ ಎಸಿಬಿ, ಲೋಕಾಯುಕ್ತ ಎರಡೂ ಸಂಸ್ಥೆಗಳು ಅತಂತ್ರ ಸ್ಥಿತಿ ಎದುರಿಸುತ್ತಿವೆ.
ಇನ್ನು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆ ಮಾಡುವಂತೆ ಹೈಕೋರ್ಟ್ ಆದೇಶದಲ್ಲಿ ತಿಳಿಸಿತ್ತು. ಆದರೆ ಇದುವರೆಗೆ ಸರ್ಕಾರ ಆ ಬಗ್ಗೆಯೂ ನಿಖರ ನಿರ್ದೇಶನ ನೀಡದೆ ವಿಳಂಬ ಮಾಡುತ್ತಿದೆ. ಅದರಿಂದ ಪ್ರಕರಣಗಳು ವಿಲೇವಾರಿ ಆಗದೆ ನನೆಗುದಿಗೆ ಬಿದ್ದಿವೆ.
ಇತ್ತ ಸಾರ್ವಜನಿಕರು ನೀಡುವ ದೂರುಗಳನ್ನು ಆಧರಿಸಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದರೆ, ಹೈಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದಂತೆ ಆಗುತ್ತದೆ. ಅದೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುವುದಕ್ಕೆ ಇದುವರೆಗೂ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿಲ್ಲ. ಹೀಗಾಗಿ ಎರಡೂ ಸಂಸ್ಥೆಗಳ ಅಧಿಕಾರಿಗಳ ಕೈ ಕಟ್ಟಿ ಹಾಕಿದಂತಾಗಿದೆ.
ಭ್ರಷ್ಟಾಚಾರ ನಿಗ್ರಹದಳ ರದ್ದುಪಡಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ನಂತರ ಸಾರ್ವಜನಿಕರಿಂದ ಕೇವಲ ಕುಂದುಕೊರತೆಗಳ ಸಂಬಂಧ ಎರಡೂ ಸಂಸ್ಥೆಗಳು ದೂರು ಸ್ವೀಕರಿಸುತ್ತಿವೆ ಅಷ್ಟೇ. ಆದರೆ, ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳ ವಿರುದ್ಧ ನೀಡುವ ದೂರುಗಳನ್ನು ಸ್ವೀಕರಿಸುತ್ತಿಲ್ಲ. ಒಮ್ಮೆ ದೂರು ಸ್ವೀಕರಿಸಿದರೂ ಯಾವುದೇ ಕ್ರಮಕ್ಕೂ ಮುಂದಾಗುತ್ತಿಲ್ಲ.
ಇನ್ನು ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡುವುದರೊಂದಿಗೆ ಶಕ್ತಿ ತುಂಬುವುದಾಗಿ ಸರ್ಕಾರ ಬೊಬ್ಬೆ ಹೊಡೆಯುತ್ತಿದೆಯಷ್ಟೇ. ಆದರೆ, ಸತ್ಯ ಏನೆಂದರೆ ಆ ಸಂಸ್ಥೆಗೆ ಶಕ್ತಿ ತುಂಬಿದರೆ ನಮಗೇ ಎಲ್ಲಿ ಕಂಟಕ ಆಗುತ್ತದೋ ಎಂಬ ಆತಂಕವೂ ಸರ್ಕಾರಕ್ಕೆ ಇದೆ.
ಹೀಗಾಗಿ ಸರ್ಕಾರ ಲೋಕಾಯುಕ್ತಕ್ಕೆ ಬಲ ತುಂಬುವುದಾಗಿ ಹೇಳುತ್ತಲೇ ದಿನಗಳನ್ನು ದೂಡುತ್ತ ಇದೆ. ಆದರೆ ಇತ್ತ ಎರಡೂ ಸಂಸ್ಥೆಗಳ ಅಧಿಕಾರಿಗಳು ರಾಜ್ಯ ಸರ್ಕಾರದಿಂದ ಸ್ಪಷ್ಟ ಆದೇಶ ಬರುವವರೆಗೂ ಯಥಾ ಸ್ಥಿತಿಯನ್ನು ಕಾಪಾಡಿಕೊಂಡು ಹೋಗುವುದು ಬಿಟ್ಟರೆ ಬೇರೆ ದಾರಿ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಇನ್ನು ಜನರಲ್ಲಿ ಗೊಂದಲ ಉಂಟು ಮಾಡುವ ನಡೆಯನ್ನು ಸರ್ಕಾರ ಅನುಸರಿಸುತ್ತಿದೆ ಎಂಬುವುದಕ್ಕೆ ಈಗ ಜಾರಿಯಲ್ಲಿರುವ ಎಸಿಬಿ ವ್ಯವಸ್ಥೆಯನ್ನು ರದ್ದುಪಡಿಸಿ ಲೋಕಾಯುಕ್ತಕ್ಕೆ ಬಲ ತುಂಬುವ ಪ್ರಕ್ರಿಯೆಗೆ ಚುರುಕು ನೀಡದಿರುವುದೇ ನಿದರ್ಶನವಾಗಿದೆ.
ಲೋಕಾಯುಕ್ತ ಸಂಸ್ಥೆಯಲ್ಲೂ ಯಾವ ಬದಲಾವಣೆಯನ್ನೂ ಮಾಡದೆ ಸರ್ಕಾರ ಕೈಚೆಲ್ಲಿರುವುದರಿಂದ ಕೆಲಸಗಳು ನನೆಗುದಿಗೆ ಬಿದ್ದಿವೆ. ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಪಡಿಸಿರುವ ಹೈಕೋರ್ಟ್ ತೀರ್ಪಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚು ಪ್ರಶಂಸೆ ವ್ಯಕ್ತವಾಗುತ್ತಿದೆ.
ಜತೆಗೆ ಭ್ರಷ್ಟ ಹಾಗೂ ಅದಕ್ಷ ರಾಜಕಾರಣಿಗಳ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ದೂರು ನೀಡುವುದಕ್ಕೆ ಕೆಲವರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ಸರ್ಕಾರ ಈ ವಿಚಾರದಲ್ಲಿ ಅಂತಿಮ ನಿರ್ಧಾರ ಪ್ರಕಟಿಸದೇ ಮೀನಮೇಷ ಎಣಿಸುತ್ತಿರುವುದು ಜನರಲ್ಲಿ ಬೇಸರ ಮೂಡಿಸಿದೆ.
ಇನ್ನು ಏನು ಕೆಲಸ ಮಾಡಬೇಕು ಎಂಬುವುದು ತಿಳಿಯದೇ ಎರಡೂ ಸಂಸ್ಥೆಗಳ ಅಕಾರಿಗಳು ನಿತ್ಯ ಕಚೇರಿಗೆ ಬಂದು ಹೋಗುತ್ತಿದ್ದಾರೆ. ದಾಖಲಾಗಿರುವ ಪ್ರಕರಣಗಳ ಕುರಿತಂತೆ ಯಾವುದೇ ಪ್ರಕ್ರಿಯೆ ನಡೆಸುತ್ತಿಲ್ಲ. ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಯಲ್ಲಿ ಯಾವ ಯಾವ ಹುದ್ದೆಯಲ್ಲಿದ್ದರೆಯೋ ಆ ಅಧಿಕಾರಿಗಳು ಅಲ್ಲೇ ಮುಂದುವರಿದಿದ್ದಾರೆ. ಅವರನ್ನು ಪೊಲೀಸ್ ಇಲಾಖೆಗೆ ಅಥವಾ ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸುವ ಪ್ರಕ್ರಿಯೆಗಳು ಇನ್ನೂ ನಡೆದಿಲ್ಲ. ಈ ಎಲ್ಲ ಅಧಿಕಾರಿಗಳನ್ನು ಸುಮ್ಮನೇ ಕೂರಿಸಿಕೊಂಡು ಸರ್ಕಾರ ವೇತನಕೊಡುತ್ತಿದೆ.
ಎಸಿಬಿ ವ್ಯವಸ್ಥೆಯನ್ನು ಹೈಕೋರ್ಟ್ ರದ್ದುಪಡಿಸಿರಬಹುದು. ಆದರೆ ಸಾರ್ವಜನಿಕರಿಂದ ಬರುವ ದೂರುಗಳನ್ನು ದಾಖಲಿಸಿಕೊಂಡು ಭ್ರಷ್ಟರ ಮೇಲೆ ದಾಳಿ ನಡೆಸುವ ಅಧಿಕಾರವನ್ನು ಸರ್ಕಾರ ನಮಗೆ ಕೊಟ್ಟಿಲ್ಲ. ಸರ್ಕಾರದಿಂದ ಇದುವರೆಗೂ ಯಾವುದೇ ಆದೇಶ ಹೊರಬಿದ್ದಿಲ್ಲ. ಲೋಕಾಯುಕ್ತ ವ್ಯವಸ್ಥೆಯಲ್ಲಿ ಅದೇ ರೀತಿಯಲ್ಲಿ ಕಾರ್ಯಚಟುವಟಿಕೆಗಳು ಮುಂದುವರಿದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆತ್ಮಸಾಕ್ಷಿಯಿಂದ ಲೋಕಾಯುಕ್ತಕ್ಕೆ ಬಲ ತುಂಬುವ ಆಸಕ್ತಿ ಮತ್ತು ಇಚ್ಛಾಶಕ್ತಿ ಬಿಜೆಪಿ ಸರ್ಕಾರಕ್ಕೆ ಇಲ್ಲವೆಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇತ್ತ ರಾಜ್ಯ ಸರ್ಕಾರ ಹೈಕೋರ್ಟ್ ಆದೇಶದ ಬಳಿಕ ಗೊಂದಲದಲ್ಲಿ ಸಿಲುಕಿದೆ.
ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಹೈಕೋರ್ಟ್ ತೀರ್ಪು ಹೊರಬಿದ್ದಿದೆ. ಇದರಿಂದ ತನ್ನ ರಾಜಕೀಯ ಅನುಕೂಲಕ್ಕಾಗಿ ಲೋಕಾಯುಕ್ತ ಬಲಗೊಳಿಸುವ ಮಾತನಾಡುತ್ತಿದೆ ಬಿಜೆಪಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಎಸಿಬಿಯನ್ನು ಹೈಕೋರ್ಟ್ ರದ್ದುಪಡಿಸಿರುವುದರಿಂದ ಸಾರ್ವಜನಿಕರಿಂದ ನಮಗೆ ದೂರುಗಳು ಬರುತ್ತಿಲ್ಲ. ಒಮ್ಮೆ ದೂರುಗಳು ಬಂದರೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ದಾಳಿ ನಡೆಸುವಂತಿಲ್ಲ. ಹೈಕೋರ್ಟ್ ಆದೇಶದಂತೆ ಯಥಾ ಸ್ಥಿತಿಯನ್ನಷ್ಟೇ ಕಾಪಾಡುತ್ತಿದ್ದೇವೆ ಎಂದು ಎಸಿಬಿ ಅಧಿಕಾರಿ ಮಾಹಿತಿ ನೀಡಿದ್ದಾರೆ.