ಪಿರಿಯಾಪಟ್ಟಣ: ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಸರ್ವೇ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ರಾಜಕೀಯದ ಒತ್ತಡಕ್ಕೆ ಮಣಿದು ಅಕ್ರಮವಾಗಿ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಜಮೀನಿನ ಮಾಲೀಕ ಬಿ.ಎ.ಪ್ರಕಾಶ್ ಆರೋಪಿಸಿದ್ದಾರೆ.
ತಾಲೂಕಿನ ಪುನಾಡಹಳ್ಳಿ ಬಸವನಹಳ್ಳಿ ಗ್ರಾಮದ ಸರ್ವೇ ನಂಬರ್ 16/2 ರಲ್ಲಿ 10 ಎಕರೆ 16 ಗುಂಟೆ ಜಮೀನು ನನಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯಾಗಿದ್ದು, ಈ ಜಮೀನಿನ ಪಕ್ಕದಲ್ಲಿ ಸರ್ಕಾರಿ ಓಣಿ ಇದೆ. ಈ ಓಣಿಯನ್ನು ಪಕ್ಕದ ಜಮೀನಿನವರು ಒತ್ತುವರಿ ಮಾಡಿಕೊಂಡಿದ್ದಾರೆ.
ಆದರೆ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸಿ ರಸ್ತೆ ನಿರ್ಮಿಸಬೇಕಾದ ಅಧಿಕಾರಿಗಳು ರಾಜಕೀಯದ ಒತ್ತಡಕ್ಕೆ ಮಣಿದು ಅನಗತ್ಯವಾಗಿ ನನಗೆ ಕಿರುಕುಳ ನೀಡಿ ನನ್ನ ಜಮೀನಿನಲ್ಲಿ ರಸ್ತೆ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾನು ನನ್ನ ಜಮೀನನ್ನು ಎರಡು ಬಾರಿ ಸರ್ಕಾರಿ ಮತ್ತು ಖಾಸಗಿ ಸರ್ವೇ ಮಾಡಿಸಿದ್ದು, ಈ ಸರ್ವೇಯಲ್ಲಿ ನಾನು ಯಾವುದೇ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದು ಕಂಡು ಬಂದಿಲ್ಲ. ಆದರೆ ಸರ್ವೇ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಓಣಿ ಒತ್ತುವರಿ ಮಾಡಿಕೊಂಡಿರುವವರನ್ನು ತೆರವುಗೊಳಿಸಿ ರಸ್ತೆ ನಿರ್ಮಿಸದೆ ವಿನಃ ಕಾರಣ ನನಗೆ ತೊಂದರೆ ನೀಡುತ್ತಿದ್ದಾರೆ.
ಈ ವಿಚಾರವಾಗಿ ನಾನು ಉಚ್ಚ ನ್ಯಾಯಾಲಯದಿಂದ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡದಂತೆ ತಡೆಯಾಜ್ಞೆ ತಂದಿದ್ದೇನೆ. ಈ ತಡೆಯಾಜ್ಞೆಯ ಪ್ರತಿಯನ್ನು ತಹಸೀಲ್ದಾರ್, ಭೂ ಮಾಪನಾ ಇಲಾಖೆಯ ಸಹಾಯಕ ನಿರ್ದೇಶಕರು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಪೊಲೀಸ್ ಉಪ ನಿರೀಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿ ನ್ಯಾಯಾಲಯಲ್ಲಿರುವ ಪ್ರಕರಣ ಇತ್ಯರ್ಥವಾಗುವವರೆಗೂ ಸರ್ವೇ ಕಾರ್ಯ ನಡೆಸಬಾರದು ಎಂದು ದೂರು ನೀಡಿದ್ದೇನೆ.
ಆದರೆ ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಬಾರದೆ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರನ್ನು ಸ್ಥಳಕ್ಕೆ ಕಳುಹಿಸಿ ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘಿಸಿ ಅಕ್ರಮವಾಗಿ ರಸ್ತೆ ನಿರ್ಮಿಸುತ್ತಿದ್ದಾರೆ. ಇವರ ವಿರುದ್ಧ ಮತ್ತೆ ನ್ಯಾಯಾಲಯಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಭೂ ಮಾಪನಾ ಇಲಾಖೆಯ ಮುನಿಸ್ವಾಮಿ, ಕಂದಾಯ ನಿರೀಕ್ಷಕ ಪ್ರದೀಪ್, ಗ್ರಾಮ ಲೆಕ್ಕಿಗ ರಾಜೇಶ್, ಗ್ರಾಮದ ಮುಖಂಡರಾದ ಮಂಜು, ಶಿವಣ್ಣ, ರಾಮಚಂದ್ರ, ನಟರಾಜು, ರಾಮೇಗೌಡ, ನಾಗೇಗೌಡ, ಕಾಳಪ್ಪ, ಬಿ.ಜಿ.ಕುಮಾರ್, ಪ್ರತಾಪ್, ಶಿವಲಿಂಗೇಗೌಡ, ಸುಬ್ರಹ್ಮಣ್ಯಚಾರ್ ಇದ್ದರು.