ಮೈಸೂರು : ದಸರಾದಲ್ಲಿ ಭಾಗವಹಿಸುವ ಗಜಪಡೆಯಲ್ಲಿನ ಲಕ್ಷ್ಮೀ ಆನೆ ಗಂಡು ಮರಿಗೆ ಜನ್ಮನೀಡಿರುವ ಹಿನ್ನೆಲೆಯಲ್ಲಿ ಮಾವುತ ಮತ್ತು ಕಾವಾಡಿಗರ ಕುಟುಂಬದವರಿಗೆ ಒಬ್ಬಟ್ಟಿನ ಊಟವನ್ನು ಇಂದು ಆಯೋಜನೆ ಮಾಡಲಾಗಿತ್ತು.
ಈ ವೇಳೆ ಜಿಲ್ಲಾಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ದಸರಾ ಆನೆಗಳನ್ನು ಪಾಲನೆ, ಪೋಷಣೆ ಮಾಡುತ್ತಿರುವ ಕಾವಾಡಿಗರು ಹಾಗೂ ಮಾವುತರೊಟ್ಟಿಗೆ ಸಮಯ ಕಳೆದರು. ಜತೆಗೆ ಅವರ ಯೋಗಕ್ಷೇಮ ವಿಚಾರಿಸಿದರು.
ಮಾವುತ ಮತ್ತು ಕಾವಾಡಿಗರ ಮಕ್ಕಳಿಗೆ ಆಟದ ಸಾಮಗ್ರಿಗಳನ್ನು ವಿತರಣೆ ಮಾಡಿದರು. ಇದೇ ವೇಳೆ ಅರಮನೆ ಆವರಣದಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಆರೋಗ್ಯ ತಪಾಸಣೆ ಕೇಂದ್ರವನ್ನು ಸಚಿವರು ವೀಕ್ಷಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದಸರಾಗೆ ಆಗಮಿಸಿರುವ ವೇಳೆ ಲಕ್ಷ್ಮೀ ಆನೆ ಗಂಡು ಮರಿಗೆ ಜನ್ಮನಿಡಿದ್ದು ತಾಯಿ ಆನೆ ಮತ್ತು ಮರಿ ಎರಡೂ ಕೂಡ ಆರೋಗ್ಯವಾಗಿವೆ. ಇದರ ಜತೆಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಆನೆಮರಿಗೆ ಶ್ರೀ ದತ್ತಾತ್ರೇಯ ಎಂದು ನಾಮಕರಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾವುತ ಮತ್ತು ಕಾವಾಡಿಗರು ಸೇರಿ ಎಲ್ಲರಿಗೂ ಒಬ್ಬಟ್ಟಿನ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಇನ್ನು ಈ ಬಾರಿ ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಸಜ್ಜಾಗಿದೆ. ದಸರಾಗೆ ಎಲ್ಲಾ ತಯಾರಿ ನಡೆಯುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ನಾಳೆ ಸಂಜೆ ಅಂತಿಮವಾಗಲಿದೆ ಎಂದು ತಿಳಿಸಿದರು.