ಮೈಸೂರು: ಐತಿಹಾಸಿಕ ಹಿನ್ನೆಲೆ ಹೊಂದಿರುವ ನಾಡ ಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯಾಗಿರುವ ಜಂಬೂ ಸವಾರಿಯು ವಿಜಯದಶಮಿಯ ದಿನವಾದ ಇಂದು ನಡೆಯಲಿದ್ದು, ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಸಿದ್ಧತೆಗಳು ಭರದಿಂದ ಸಾಗಿ ಪೂರ್ಣಗೊಳ್ಳುತ್ತಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಸರಾ ಮೆರವಣಿಗೆಗೆ ಚಾಲನೆ ನೀಡಲಿದ್ದು, ದಸರಾ ಜಂಬೂಸವಾರಿ ವೈಭವವನ್ನು ಕಣ್ತುಂಬಿಕೊಳ್ಳಲು ಜನರು ಕಾತದಿಂದ ಕಾಯುತ್ತಿದ್ದಾರೆ.
ಇಂದು ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪೂಜೆ ಸಲ್ಲಿಸಿ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.
750ಕೆಜಿ ಚಿನ್ನದ ಅಂಬಾರಿಯಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವರು. ಮೈಸೂರು ಅರಮನೆಯಿಂದ ಆರಂಭಗೊಳ್ಳುವ ದಸರಾ ಜಂಬೂಸವಾರಿಯ ಮೆರವಣಿಗೆ 5.07ರಿಂದ 5.18ರವರೆಗೆ ಚಾಲನೆ ನೀಡಲಾಗುವುದು.
ಮೈಸೂರು ಅರಮನೆಯಿಂದ ಆರಂಭಗೊಂಡು, ಕೆ ಆರ್ ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಆರ್ ಎಂ ಸಿ, ತಿಲಕ್ ನಗರ ಮಾರ್ಗವಾಗಿ ಸಾಗಿ, ಬನ್ನಿ ಮಂಟಪ ತಲುಪಿ, ಅಲ್ಲಿಂದ ಮೈಸೂರು ಅರಮನೆಗೆ ಮರಳಲಿದೆ.
ನಂದಿಧ್ವಜ, ವೀರಗಾಸೆ, ನಾದಸ್ವರ, ನೌಪತ್, ನಿಸಾನೆ ಆನೆಗಳು, ಎನ್ಸಿಸಿ, ಸ್ಕೌಟ್ಸ್ ಆಂಡ್ ಗೈಡ್ಸ್, ವಿವಿಧ ಪೊಲೀಸ್ ತುಕಡಿಗಳು, ನಾಡಿನ ಕಲೆ, ಸಂಸ್ಕೃತಿಯನ್ನು ಪ್ರತಿಂಬಿಸುವ 47 ಸ್ತಬ್ಧ ಚಿತ್ರಗಳು, 50 ಜಾನಪದ ಕಲಾತಂಡಗಳು ಸೇರಿದಂತೆ 100 ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ.