ಧಾರವಾಡ: ಕನ್ನಡ ನಿಘಂಟು ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದ ರೆವರೆಂಡ್ ಫರ್ಡಿನೆಂಡ್ ಕಿಟೆಲ್ ಅವರ ಕುಟುಂಬ ಒಂದೂವರೆ ಶತಮಾನದ ಅಂದರೆ ಬರೋಬರಿ 150 ವರ್ಷಗಳ ಬಳಿಕ ಕರ್ನಾಟಕಕ್ಕೆ ಭೇಟಿ ನೀಡಿದೆ.
ಅದರಲ್ಲೂ ವಿದ್ಯಾಕಾಶಿ ಧಾರವಾಡಕ್ಕೆ ಕಿಟೆಲ್ ಕುಟುಂಬಸ್ಥರು ಭೇಟಿ ನೀಡಿದ್ದು ಈ ವೇಳೆ ಸಂತಸ ಹಂಚಿಕೊಂಡಿದ್ದಾರೆ. ಸುದೀರ್ಘ ಅವಧಿಯ ಬಳಿಕ ಜರ್ಮನಿಯಿಂದ ಕರ್ನಾಟಕಕ್ಕೆ ಕಿಟೆಲ್ ಅವರ ಕುಟುಂಬ ಭೇಟಿ ನೀಡಿದ್ದು ವಿಶೇಷವಾಗಿತ್ತು.
ಕಿಟೆಲ್ ಅವರ ಮರಿಮೊಮ್ಮಗಳಾದ ಅಲ್ಮುತ್ ಬರ್ಬೋರ್ ಎಲಿನೋರ್ ಮಯರ್, ಮೊಮ್ಮಗ ಈವ್ಸ್ ಪ್ಯಾಟ್ರಿಕ್ ಹಾಗೂ ಅವರ ಸ್ನೇಹಿತ ಜಾನ್ ಫೆಡ್ರಿಕ್ ಧಾರವಾಡಕ್ಕೆ ಭೇಟಿ ನೀಡಿದವರು.
ಈ ವೇಳೆ ಧಾರವಾಡದಲ್ಲಿರುವ ಕಿಟೆಲ್ ಹೆಸರಿನ ಕಾಲೇಜು ಹಾಗೂ ಕಿಟೆಲ್ ಅವರು ನೆಲೆಸಿದ್ದ ಜಾಗಗಳನ್ನು ಅವರು ವೀಕ್ಷಣೆ ಮಾಡಿದರು. ಇನ್ನು ಕಿಟೆಲ್ ಅವರ 200ನೇ ಜನ್ಮ ದಿನಾಚರಣೆಯನ್ನು ಧಾರವಾಡದಲ್ಲೇ ಆಯೋಜಿಸಲು ಕುಟುಂಬ ನಿರ್ಧರಿಸಿರುವುದಾಗಿ ತಿಳಿಸಿದರು.
ಅಲ್ಲದೇ ಕಿಟೆಲ್ ಅವರು ಬಳಸುತ್ತಿದ್ದ ಕೆಲವೊಂದಿಷ್ಟು ವಸ್ತುಗಳನ್ನು ಮ್ಯೂಸಿಯಂಗೆ ಕೊಡಲು ಈ ಕುಟುಂಬ ನಿರ್ಧರಿಸಿರುವುದಾಗಿ ಹೇಳಿದೆ. ಜರ್ಮನಿಯಿಂದ ಕರ್ನಾಟಕಕ್ಕೆ ಬಂದ ಕುಟುಂಬ ಬಹಳ ಸಂತಸ ವ್ಯಕ್ತಪಡಿಸಿದ್ದು, ಇದು ನಮ್ಮ ತವರೂರಿನಂತೆ ಭಾಷವಾಗುತ್ತಿದೆ ಎಂದು ಖುಷಿಪಟ್ಟಿದೆ.