ಚೆನ್ನೈ: ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳನ್ನು 31 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆ ಮಡಲಾಗಿದ್ದು, ಈ ವೇಳೆ ಮಾತನಾಡಿದ ನಳಿನಿ ಶ್ರೀಹರನ್, ಸ್ಫೋಟದಲ್ಲಿ ಸಾವನ್ನಪ್ಪಿದವರ ಬಗ್ಗೆ ತುಂಬಾ ವಿಷಾದವಿದೆ. ನಾವು ಘಟನೆಯ ಬಗ್ಗೆ ಯೋಚಿಸುತ್ತಾ ಹಲವು ವರ್ಷಗಳನ್ನು ಕಳೆದಿದ್ದೇವೆ. ಆ ಕುಟುಂಬದವರ ಬಳಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ಭಾರತ ದೇಶದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ ಭಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಹಾಗೂ ಗಾಂಧಿ ಕುಟುಂಬಕ್ಕೆ ಕ್ಷಮೆ ಕೇಳಿದ್ದಾರೆ.
ಸ್ಫೋಟದಲ್ಲಿ ಅನೇಕರು ತಮ್ಮ ಆತ್ಮೀಯರನ್ನು ಕಳೆದುಕೊಂಡಿದ್ದಾರೆ. ಅವರೆಲ್ಲರೂ ಒಮ್ಮೆಯಾದರೂ ಆ ದುರಂತದಿಂದ ಯಾವುದೇ ಸಮಯದಲ್ಲಾದರೂ ಹೊರಬರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ರಾಜೀವ್ ಗಾಂಧಿಯವರ ಕುಟುಂಬವನ್ನು ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ನನ್ನನ್ನು ಭೇಟಿ ಮಾಡುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರು ನನ್ನನ್ನು ನೋಡುವ ಸಮಯ ಕಳೆದಿದೆ ಎಂದು ನಾನು ಭಾವಿಸುತ್ತೇನೆ ಎಂದಷ್ಟೇ ಹೇಳಿದರು.
1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ಪ್ರಕರಣದಲ್ಲಿ ನಳಿನಿ ಅವರಲ್ಲದೆ, ಶ್ರೀಹರನ್, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಮತ್ತು ಆರ್ಪಿ ರವಿಚಂದ್ರನ್ ಅವರು ಜೈಲು ಪಾಲಾಗಿದ್ದರು. ಅಪರಾಧಿಗಳು ತೃಪ್ತಿದಾಯಕ ನಡವಳಿಕೆ ತೋರಿದ್ದಾರೆ. ಪದವಿಗಳನ್ನು ಪಡೆದಿದ್ದು, ಪುಸ್ತಕಗಳನ್ನು ಬರೆದಿದ್ದಾರೆ. ಸಮಾಜ ಸೇವೆಯಲ್ಲಿ ಭಾಗವಹಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಮೇ ತಿಂಗಳಲ್ಲಿ, ಏಳನೇ ಅಪರಾಧಿ ಪೆರಾರಿವಾಲನ್‍ನನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ತನ್ನ ಅಸಾಮಾನ್ಯ ಅಧಿಕಾರವನ್ನು ಬಳಸಿತ್ತು. ಅದೇ ಆದೇಶವು ಉಳಿದ ಅಪರಾಧಿಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಕ್ಯಾಬಿನೆಟ್ 2018 ರಲ್ಲಿ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ರಾಜ್ಯಪಾಲರು ಬದ್ಧರಾಗಿದ್ದಾರೆ ಎಂದು ನ್ಯಾಯಾಲಯ ಗಮನಿಸಿತ್ತು.