-
ತೊಣ್ಣೂರು ಕೆರೆಗೆ ಕೆ.ಆರ್.ಎಸ್. ಮಾದರಿ ಸ್ವಯಂಚಾಲಿತ ಬಾಗಿಲು ನಿರ್ಮಾಣ
ಪಾಂಡವಪುರ : ಇತಿಹಾಸ ಪ್ರಸಿದ್ಧ ತೊಣ್ಣೂರು ಕೆರೆ ತುಂಬಿದಾಗ ನೀರು ಹೊರ ಹೋಗಲು ಕೆ.ಆರ್.ಎಸ್. ಮಾದರಿ ಸ್ವಯಂ ಚಾಲಿತ ಬಾಗಿಲು ನಿರ್ಮಿಸಲಾಗುವುದು ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ತುಂಬಿ ತುಳುಕುತ್ತಿರುವ ತಾಲೂಕಿನ ತೊಣ್ಣೂರು ಗ್ರಾಮದ ಇತಿಹಾಸ ಪ್ರಸಿದ್ಧ ಕೆರೆಗೆ ಬಾಗಿನ ಅರ್ಪಿಸಿ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚೆಗೆ ಬಿದ್ದ ನಿರಂತರ ಮಳೆಯಿಂದ ತೊಣ್ಣೂರು ಕೆರೆಯು ತುಂಬಿ ಕೋಡಿ ಬಿದ್ದಿತ್ತು. ಈ ವೇಳೆ ನೀರು ಯಥೇಚ್ಛವಾಗಿ ಹರಿದ ಕಾರಣ ಸಮೀಪದ ಕೃಷಿ ಜಮೀನುಗಳಿಗೆ ಭಾರಿ ಪ್ರಮಾಣದ ಹಾನಿಯುಂಟಾಗಿತ್ತು. ಇದೇ ರೀತಿ ಈ ಹಿಂದೆ ಒಂದೆರಡು ಬಾರಿ ರೈತರಿಗೆ ಅನಾನುಕೂಲ ಉಂಟಾಗಿತ್ತು.
ಇದನ್ನು ಮನಗಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆ.ಆರ್.ಎಸ್. ಜಲಾಶಯ ಮಾದರಿಯಲ್ಲಿ ಸ್ವಯಂ ಚಾಲಿತ ಬಾಗಿಲು ನಿರ್ಮಿಸಲಾಗುವುದು. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಚ್ಚುವರಿ ನೀರು ಬಂದಾಗ ಬಾಗಿಲು ತಂತಾನೆ ತೆರೆದು ನೀರು ಹೊರಹೋಗುತ್ತದೆ. ಇದರಿಂದ ಕೆರೆಗೆ ಯಾವುದೇ ಅಪಾಯ ಉಂಟಾಗುವುದು ತಪ್ಪುತ್ತದೆ ಎಂದರು.
ಈ ಹಿಂದೆ ಕೆರೆ ಭರ್ತಿಯಾಗಿ ಅಪಾಯದ ಮಟ್ಟ ತಲುಪಿದಾಗ ತಜ್ಞರ ಸಲಹೆಯಂತೆ ನೀರು ಹೊರಕಾಕಲು ವೈಜ್ಞಾನಿಕವಾಗಿ ಪ್ರಯತ್ನ ನಡೆಸಿದಾಗ ಕೆಲವರು ಅಪಪ್ರಚಾರ ಮಾಡಿದರು. 1993 ರಲ್ಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ತೊಣ್ಣೂರು ಕೆರೆಗೆ ಕರೆತಂದು ಕೆರೆ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡಿಸಿದ್ದೆ.
ನಂತರವೂ ತೊಣ್ಣೂರು ಕೆರೆಯಿಂದ ಸಮೀಪದ ಗ್ರಾಮಗಳಿಗೆ ಕುಡಿಯುವ ನೀರು ಕೊಡಲು ಮುಂದಾದಾಗ ಆಗಲೂ ಅಪಪ್ರಚಾರ ನಡೆಸಿದರು. ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು ಇದರಿಂದ ತಾಲ್ಲೂಕಿನ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.
ಟಿ.ಎಸ್.ಛತ್ರ ಗ್ರಾಪಂ ಅಧ್ಯಕ್ಷೆ ಭಾರತಿ, ಮಾಜಿ ಅಧ್ಯಕ್ಷರಾದ ಪೂಜಾ, ಶೃತಿ, ಎಇಇ ಪುಟ್ಟಮಾಯಿಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ, ತಾಪಂ ಇಒ ಎಸ್.ಎಂ.ಲೋಕೇಶ್ ಮೂರ್ತಿ, ಶಿಕ್ಷಣಾಧಿಕಾರಿ ಲೋಕೇಶ್, ತಾಪಂ ಮಾಜಿ ಸದಸ್ಯ ರಾಜಣ್ಣ ಇನ್ನಿತರರು ಇದ್ದರು.
ವರದಿ: ವಿಶ್ವನಾಥನ್, ಪಾಂಡವಪುರ