ಹುಮನಾಬಾದ್: ವೇತನ ಆಯೋಗದ ಮಾದರಿಯಲ್ಲಿ ಸಾರಿಗೆ ನೌಕರರಿಗೂ ವೇತನ ನೀಡಬೇಕು ಎಂಬ ಬಗ್ಗೆ ಇದೇ ಡಿಸೆಂಬರ್ 19ರಿಂದ ನಡೆಯಲಿರುವ ಬೆಳಗಾವಿಯ ಅಧಿವೇಶನದಲ್ಲಿ ಧ್ವನಿಎತ್ತುವಂತೆ ಬೀದರ್ ವಿಭಾಗದ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಹುಮನಾಬಾದ್ ಶಾಸಕ ರಾಜಶೇಖರ ಬಿ.ಪಾಟೀಲ್ ಅವರಲ್ಲಿ ಮನವಿ ಮಾಡಿದರು.
ಭಾನುವಾರ ಶಾಸಕರನ್ನು ಭೇಟಿ ಮಾಡಿದ ಕೂಟದ ಪದಾಧಿಕಾರಿಗಳು ಮುಷ್ಕರದ ಸಮಯದಲ್ಲಿ ಆಗಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಈ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಮೇಲೆ ಒತ್ತಡ ತರುವಂತೆ ವಿನಂತಿಸಿದ್ದಾರೆ.
ನಮ್ಮ ಬೇಡಿಕೆಗಳಾದ ಸಾರಿಗೆ ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ ಪ್ರಕರಣಗಳನ್ನು ಯಾವುದೇ ನಿಬಂಧನೆಗಳನ್ನು ವಿಧಿಸದೇ ಮರು ನೇಮಕ ಮಾಡಿಕೊಳ್ಳವುದು, ಮುಷ್ಕರದ ಸಮಯದಲ್ಲಿ ಮಾಡಿರುವ ವರ್ಗಾವಣೆ ಹಾಗೂ ಇತರೆ ಶಿಕ್ಷೆಗಳನ್ನು ಯಾವುದೆ ನಿಬಂಧನೆಗಳನ್ನು ವಿಧಿಸದೆ ರದ್ದು ಮಾಡಿ, ದಿನಾಂಕ: 06/04/2021ರ ಪೂರ್ವದ ಯಥಾಸ್ಥಿತಿಯನ್ನು ಕಾಪಾಡಬೇಕು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರಿಗೆ, ಸರ್ಕಾರಿ ನೌಕರರಂತೆ ಸಮಾನ ವೇತನವನ್ನು ನೀಡಬೇಖು. ಸಂಸ್ಥೆಯಲ್ಲಿ ಚಾಲ್ತಿಯಲ್ಲಿರುವ ನಾಲ್ಕು ವರ್ಷಕ್ಕೊಮ್ಮೆ ಮಾಡುವ ಅವೈಜ್ಞಾನಿಕ ಚೌಕಾಸಿ ವೇತನ ಪರಿಷ್ಕರಣಾ ಪದ್ಧತಿ ಕೈಬಿಟ್ಟು, ಸರ್ಕಾರದ ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ ಚಾಲ್ತಿಯಲ್ಲಿರುವ ವೇತನ ಆಯೋಗದ ಮಾದರಿಯನ್ನು ಅಳವಡಿಸಬೇಕು.
ಮುಷ್ಕರದ ಸಮಯದಲ್ಲಿ ನಾಲ್ಕು ನಿಗಮಗಳ ಸಾರಿಗೆ ನೌಕರರ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ದಾಖಲಿಸಿರುವ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು. ಸಾರಿಗೆ ನಿಗಮಗಳಲ್ಲಿ ಕೂಡಲೆ ಕಾರ್ಮಿಕ ಸಂಘಗಳ ಚುನಾವಣೆ ನಡೆಸಬೇಕು. (1992 ನಂತರ ಸಾರಿಗೆ ಸಂಸ್ಥೆಯಲ್ಲಿ ಕಾರ್ಮಿಕ ಸಂಘಟನೆಗಳ ಚುನಾವಣೆಗಳು ನಡೆದಿರುವುದಿಲ್ಲ)
ಸಾರಿಗೆ ಸಂಸ್ಥೆಗಳಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ಮತ್ತು ನಿರ್ವಾಹಣೆಯನ್ನು ಖಾಸಗಿಯವರಿಗೆ ವಹಿಸಿರುವುದು, ಇತರ ವಾಹನಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲನಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದು ಮತ್ತು ಕೆಲವು ಮಾರ್ಗಗಳನ್ನು ಖಾಸಗಿ ವಾಹನಗಳ ಚಾಲನೆಗೆ ಅನುಮತಿ ನೀಡಿ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣದ ಮೂಲಕ ರಾಜ್ಯದ ಯುವಕರಿಗೆ ಮತ್ತಷ್ಟು ನಿರುದ್ಯೋಗ ಸಮಸ್ಯೆಯನ್ನು ಸೃಷ್ಟಿ ಮಾಡುವ ಯೋಜನೆಯನ್ನು ಈ ಕೂಡಲೆ ಕೈ ಬಿಡಬೇಕು.
ಈ ಬೇಡಿಕೆಗಳ ಈಡೇರಿಕೆ ಬಗ್ಗೆ ತಾವು ಈ ಅಧಿವೇಶನದಲ್ಲಿ ಧ್ವನಿಎತ್ತಿ ನಮಗೆ ನ್ಯಾಯಯುತ ವೇತನ ಕೊಡಿಸಲು ನೆವಾಗಬೇಕು ಎಂದು ಮನವಿ ಮಾಡಿದರು. ಪದಾಧಿಕಾರಿಗಳ ಮನವಿಗೆ ಸ್ಪಂದಿಸಿದ ಶಾಸಕ ರಾಜಶೇಖರ ಬಿ.ಪಾಟೀಲ್ ಈ ಬಾರಿಯ ಅಧಿವೇಶನದಲ್ಲಿ ಸತಾಯಗತಾಯ ನಿಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.