ಬೆಂಗಳೂರು: ನಟ, ಹೋರಾಟಗಾರ ಚೇತನ್ ಅಹಿಂಸಾ ವಿರುದ್ಧ ಕಾಂತಾರ ಚಿತ್ರದಲ್ಲಿ ದೈವಾರಾಧನೆ ಮತ್ತು ನಂಬಿಕೆ ಕುರಿತ ಟ್ವೀಟ್ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಕಾಂತಾರ ಚಿತ್ರದಲ್ಲಿ ದೈವಾರಾಧನೆ ಮತ್ತು ನಂಬಿಕೆ ಕುರಿತು ಸಾಮಾಜಿಕ ಹೋರಾಟಗಾರ ಮತ್ತು ನಟ ಚೇತನ್ ಎ ಕುಮಾರ್ ಟ್ವೀಟ್ ಮಾಡಿ, ಭೂತ ಮತ್ತು ಕೋಲಾ ದೈವ ನಂಬಿಕೆ ಹಿಂದೂ ಧರ್ಮದಲ್ಲಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಹಲವರು ಚೇತನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಅಲ್ಲದೆ ಬೆಂಗಳೂರು ನಿವಾಸಿ ಶಿವಕುಮಾರ್ ಎಂಬುವವರು ನಟ ಚೇತನ್ ವಿರುದ್ಧ ಐಪಿಸಿಯ ಸೆಕ್ಷನ್ 505(2) (ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುವುದು) ಅಡಿಯಲ್ಲಿ ಪ್ರಕರಣ ಹಾಕಬೇಕು ಎಂದು ದೂರಿನಲ್ಲಿ ತಿಳಿಸಿದ್ದರು.
ಈ ಸಂಬಂಧ ಸಮಾಜದಲ್ಲಿ ದ್ವೇಷವನ್ನು ಹುಟ್ಟುಹಾಕುವ ಅಥವಾ ಉತ್ತೇಜಿಸುವ ಯಾವುದೇ ಹೇಳಿಕೆಯನ್ನು ತಾನು ನೀಡಿಲ್ಲ ಎಂದು ನಟ ವಾದಿಸಿದರು. ಆದರೆ, ಹೈಕೋರ್ಟ್ ನ್ಯಾಯಮೂರ್ತಿ ಎಂಐ ಅರುಣ್, ನಟ ಚೇತನ್ ಅಹಿಂಸಾ ಅವರ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಇನ್ನು, ಅರ್ಜಿದಾರರ ವಿರುದ್ಧದ ಆರೋಪಗಳು ತನಿಖೆಯ ವಿಷಯವಾಗಿದ್ದು, ಸಂಬಂಧಪಟ್ಟ ವಸ್ತುಗಳನ್ನು ವಶಪಡಿಸಿಕೊಂಡ ನಂತರ, ಅವರು ಅಪರಾಧವನ್ನು ಮಾಡಿದ್ದಾರೆಯೇ ಎಂದು ನಿರ್ಧರಿಸಲು ಪೊಲೀಸರಿಗೆ ಸಾಧ್ಯವಾಗುತ್ತದೆ. ಬಳಿಕ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ಸರ್ಕಾರಿ ಪ್ಲೆಡರ್ ಕೆ ರಾಹುಲ್ ರೈ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹಾಗಾಗಿ ಅರ್ಜಿದಾರರು ಸಲ್ಲಿಸಿರುವ ಅರ್ಜಿ ‘ಅವಧಿಪೂರ್ವ’ ಎಂದು ವಾದಿಸಿದ್ದಾರೆ.
ಸೂಕ್ತ ತನಿಖೆ ನಡೆಸದೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಗತ್ಯ ಜಾಮೀನು ಪಡೆಯಲು ಸೂಕ್ತವಾದ ನ್ಯಾಯಾಲಯಕ್ಕೆ ತೆರಳಲು ಅರ್ಜಿದಾರರಿಗೆ ಯಾವಾಗಲೂ ಸ್ವಾತಂತ್ರ್ಯವಿದೆ ಮತ್ತು ಕಾನೂನಿನ ಪ್ರಕಾರ ಸಂಬಂಧಪಟ್ಟ ನ್ಯಾಯಾಲಯವು ಅದನ್ನು ಪರಿಗಣಿಸುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.
ಪ್ರಕರಣ ಇನ್ನೂ ತನಿಖೆಯಲ್ಲಿರುವುದರಿಂದ, ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳು ಅಪರಾಧವಾಗಿದೆಯೇ ಎಂದು ಈ ನ್ಯಾಯಾಲಯವು ನಿರ್ಧರಿಸಲು ಸಾಧ್ಯವಿಲ್ಲ. ತನಿಖೆ ಪೂರ್ಣಗೊಂಡ ನಂತರ ಪೊಲೀಸರು ಅರ್ಜಿದಾರರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲು ನಿರ್ಧರಿಸಿದರೆ, ಅರ್ಜಿದಾರರಿಗೆ ಕಾನೂನಿನ ಪ್ರಕಾರ ಈ ನ್ಯಾಯಾಲಯಕ್ಕೆ ತೆರಳಲು ಯಾವಾಗಲೂ ಸ್ವಾತಂತ್ರ್ಯವಿದೆ ಎಂದು ಹೈಕೋರ್ಟ್ ಮತ್ತೊಮ್ಮೆ ತಿಳಿಸಿದೆ.