ಬೆಂಗಳೂರು: ಬಿಎಂಟಿಸಿಯಲ್ಲಿ ಮುಷ್ಕರದ ವೇಳೆ ವಜಾಗೊಂಡು ಮತ್ತೆ ಜಂಟಿ ಮೆಮೋ ಮೂಲಕ ಕರ್ತವ್ಯಕ್ಕೆ ಮರಳುತ್ತಿರುವ ಸಾರಿಗೆ ನೌಕರರಿಗೆ ಉಳಿದುಕೊಳ್ಳುವುದಕ್ಕೆ ಮತ್ತು ಊಟಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ತಿಳಿದುಬಂದಿದೆ. ಈ ರೀತಿ ಸಮಸ್ಯೆಯಾಗುತ್ತಿದ್ದರೆ ಕೂಡಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳನ್ನು ಫೋನ್ ಮೂಲಕ ಸಂಪರ್ಕಿಸುವಂತೆ ಕೂಟದ ಅಧ್ಯಕ್ಷ ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಊಟ ಮತ್ತು ವಸತಿ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರೆ ತಾವು ನಮ್ಮನ್ನು ಈ ಫೋನ್ ನಂಬರ್‌ಗಳ ಮೂಲಕ ಸಂಪರ್ಕಿಸಿ (ಕೂಟದ ಅಧ್ಯಕ್ಷ ಚಂದ್ರಶೇಖರ್- 9686188007, ಮಹಿಳಾ ಅಧ್ಯಕ್ಷರಾದ ಚಂಪಕಾವತಿ- 8310825953, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ – 9035894266).
ಏಪ್ರಿಲ್ 2021ರ ವೇಳೆ ನಡೆದ ಮುಷ್ಕರದ ಸಂದರ್ಭದಲ್ಲಿ ನೂರಾರು ನೌಕರರನ್ನು ಸಂಸ್ಥೆ ಕೆಲಸದಿಂದ ಏಕಾಏಕಿ ವಜಾಮಾಡಿತ್ತು. ಹೀಗಾಗಿ ವಜಾಗೊಂಡಿರುವ ನೌಕರರಲ್ಲಿ ಹಲವರು ಬೆಂಗಳೂರು ತೊರೆದು ತಮ್ಮ ಸ್ವಂತ ಊರುಗಳಿಗೆ ಹೋಗಿದ್ದಾರೆ. ಈಗ ಮತ್ತೆ ಕೆಲಸಕ್ಕೆ ಮರಳಲು ಸಂಸ್ಥೆ ಕರೆ ನೀಡಿರುವುದರಿಂದ ಉತ್ತರ ಕರ್ನಾಟಕ ಭಾಗದ ನೌಕರರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಬರುತ್ತಿದ್ದಾರೆ.
ಸದ್ಯ ಅವರಿಗೆ ಉಳಿದು ಕೊಳ್ಳುವುದಕ್ಕೆ ಮತ್ತು ಊಟಕ್ಕೆ ಸ್ವಲ್ಪ ತೊಂದರೆ ಆಗುತ್ತಿದ್ದು ಅವರು ತಮ್ಮ ಸಹೋದ್ಯೋಗಿಗಳಲ್ಲಿ ಸಮಸ್ಯೆ ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದಾರೆ. ಹೀಗಾಗಿ ಅಂಥ ಸಮಸ್ಯೆಗೆ ಸಿಲುಕಿರುವವರು ಕೂಡಲೇ ಕೂಟದ ಪದಾಧಿಕಾರಿಗಳನ್ನು ಸಂಪರ್ಕಿಸಿ ತಾತ್ಕಾಲಿಕವಾಗಿ ನಿಮಗೆ ಎಲ್ಲ ಸೌಲಭ್ಯಗಳನ್ನು ಮಾಡಿಕೊಡುತ್ತೇವೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.