ನೇಪಾಳ: ನೇಪಾಳದ ಪೊಖರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದ ವಿಮಾನ ಪತನಗೊಂಡ ಘಟನೆಯಲ್ಲಿ 40 ಪ್ರಯಾಣಿಕರು ಮೃತಪಟ್ಟಿದ್ದಾರೆ. ನೇಪಾಳ ಸರ್ಕಾರ ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಣೆ ಮಾಡಿದೆ.
ಯೇತಿ ಏರ್ಲೈನ್ಸ್ನ 9ಎನ್-ಎಎನ್ಸಿ ಎಟಿಆರ್-72 ವಿಮಾನ ಭಾನುವಾರ ಪೊಖರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಂದರ್ಭದಲ್ಲಿ ಪತನಗೊಂಡಿದೆ. ವಿಮಾನದಲ್ಲಿ 68 ಪ್ರಯಾಣಿಕರು, ನಾಲ್ವರು ಸಿಬ್ಬಂದಿಗಳಿದ್ದರು.
ಕಠ್ಮಂಡು ವಿಮಾನ ನಿಲ್ದಾಣದಿಂದ ಈ ವಿಮಾನ ಬೆಳಗ್ಗೆ 10.30ಕ್ಕೆ ಸಂಚಾರ ಆರಂಭಿಸಿತ್ತು. ಲ್ಯಾಂಡ್ ಆಗುವ ವೇಳೆ ಹಳೆಯ ವಿಮಾನ ನಿಲ್ದಾಣ ಮತ್ತು ಪೊಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಸೇತಿ ನದಿ ದಂಡೆ ಮೇಲೆ ಪತನಗೊಂಡಿದೆ.
ವಿಮಾನದಲ್ಲಿ ಐವರು ಭಾರತೀಯ ನಾಗರಿಕರು ಸಹ ಇದ್ದರು. ನಾಲ್ವರು ಮಕ್ಕಳು ಸೇರಿದಂತೆ 40 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಪತನಗೊಂಡ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವಿಮಾನವು ಕಸ್ಕಿ ಜಿಲ್ಲೆಯ ವ್ಯಾಪ್ತಿಯಲ್ಲಿ ಪತನಗೊಂಡಿದೆ. ಕಸ್ಕಿ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಮತ್ತೊಂದು ಕಡೆ ಪತನಗೊಂಡ ವಿಮಾನದ ಬ್ಲಾಕ್ ಬಾಕ್ಸ್ ಪತ್ತೆ ಕಾರ್ಯವೂ ನಡೆಯುತ್ತಿದೆ.
ಪೊಖರಾ ವಿಮಾನ ನಿಲ್ದಾಣದ ಬಳಿ ವಿಮಾನ ಪತನಗೊಂಡ ಮಾಹಿತಿ ಪಡೆದ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ತುರ್ತು ಸಭೆಯನ್ನು ನಡೆಸಿದರು. ರಕ್ಷಣಾ ಕಾರ್ಯಾಚರಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ದುರಂತಕ್ಕೆ ಸಂತಾಪ ಸೂಚಿಸಲು ಜನವರಿ 16ರಂದು ನೇಪಾಳ ಸರ್ಕಾರ ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಣೆ ಮಾಡಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ದುರಂತದಲ್ಲಿ 40 ಜನರು ಮೃತಪಟ್ಟಿದ್ದಾರೆ.
ವಿಮಾನ ದುರಂತ ಘಟನೆ ಬಳಿಕ ನೇಪಾಳ ಪ್ರಧಾನಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ರಕ್ಷಣಾ ಕಾರ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ವಿಮಾನ ಪತಗೊಂಡ ಬಳಿಕ ಬೆಂಕಿ ಹೊತ್ತಿಕೊಂಡು ದಟ್ಟವಾದ ಹೊಗೆ ಆವರಿಸಿದೆ. ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ನೇಪಾಳ ಪ್ರಧಾನಿ ಮತ್ತು ಗೃಹ ಸಚಿವರು ಘಟನಾ ಸ್ಥಳಕ್ಕೆ ಭೇಟಿ ನೀಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಭೇಟಿ ರದ್ದಾಗಿದೆ. ರಾಷ್ಟ್ರ ರಾಜಧಾನಿಯಿಂದ ಉಭಯ ನಾಯಕರು ರಕ್ಷಣಾ ಕಾರ್ಯದ ಉಸ್ತುವಾರಿಯ ಮಾಹಿತಿ ಪಡೆಯುತ್ತಿದ್ದಾರೆ.
A total of 68 passengers & four crew members were on board the Yeti airlines aircraft that crashed between the old airport and the Pokhara International Airport, Sudarshan #Bartaula, spokesperson of Yeti Airlines: The Kathmandu Post#nepal pic.twitter.com/ap0Q02NivV
— Rahul Sisodia (@Sisodia19Rahul) January 15, 2023