ಬೆಂಗಳೂರು: ಸಾರಿಗೆ ನೌಕರರು ಮತ್ತೊಂದು ಮುಷ್ಕರಕ್ಕೆ ಸಜ್ಜಾಗುತ್ತಿದ್ದಾರೆ ಎಂಬ ಬಗ್ಗೆ ತಿಳಿದ ಸಾರಿಗೆ ಸಚಿವ ಬಿ.ಶ್ರೀರಾಮುಲು ಕೇಂದ್ರ ಕಚೇರಿಗೆ ದಿಢೀರ್ ಭೇಟಿನೀಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಹೌದು! ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿಗಳು ಕಳೆದ ಮೂರು ವರ್ಷದಿಂದಲೂ ನೌಕರರನ್ನು ಕೀಳಾಗಿ ಕಾಣುವ ಮೂಲಕ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸದೆ ಅಸಡ್ಡೆ ಭಾವನೆ ತೋರುತ್ತಲೇ ಬಂದಿವೆ.
ಹೀಗಾಗಿ ಈ ಹಿಂದೆ ಸಾರಿಗೆ ನೌಕರರ ಕೂಟ ಈ ಬಗ್ಗೆ ಸರ್ಕಾರದ ಮತ್ತು ಅಧಿಕಾರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಹಲವಾರು ಹೋರಾಟಗಳನ್ನು ಮಾಡಿಕೊಂಡು ಬಂದಿದೆ. ಆದರೆ, ಆ ಹೋರಾಟಕ್ಕೆ ಅಷ್ಟಾಗಿ ಬೆಲೆಕೊಟ್ಟಂತೆ ಕಾಣುತ್ತಿಲ್ಲ. ಇದರಿಂದ ಬೇಸತ್ತಿರುವ ನೌಕರರು ಮತ್ತೊಮ್ಮೆ ಬೃಹತ್ ಧರಣಿಯನ್ನು ಹಮ್ಮಿಕೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ.
ಅದರಲ್ಲೂ ಈ ಬಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಪದಾಧಿಕಾರಿಗಳು ಈ ಬೃಹತ್ ಧರಣಿ ಸತ್ಯಾಗ್ರಹವನ್ನು ಇದೇ ಜ.30ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳುತ್ತಿದ್ದು, ಇದಕ್ಕಾಗಿ ಕನ್ನಡಪರ ಹೋರಾಟಗಾರರು, ಸಾಹಿತಿಗಳು, ಸ್ಯಾಂಡಲ್‌ವುಡನ್‌ನ ತಾರಾಬಳಗ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಧರಣಿಗೆ ಬೆಂಬಲ ನೀಡುವಂತೆ ಕೋರುತ್ತಿದ್ದಾರೆ.
ನೌಕರರ ಸಂಘ ಧರಣಿ ಹಮ್ಮಿಕೊಂಡು ಹೋರಾಟವನ್ನು ದೊಡ್ಡ ಮಟ್ಟದಲ್ಲೇ ಮಾಡಬೇಕು ಎಂಬ ನಿರ್ಣಯವನ್ನು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ನೌಕರರ ಸಂಘದ ಗೌರವಾಧ್ಯಕ್ಷರೂ ಆದ ಭಾಸ್ಕರ್ ರಾವ್ ಅವರ ನೇತೃತ್ವದಲ್ಲಿ ತೆಗೆದುಕೊಂಡಿದೆ.
ಇಷ್ಟು ದಿನ ನೌಕರರ ಸಂಘಟನೆಗಳ ಹಲವಾರು ಮನವಿಗೆ ಸ್ಪಂದಿಸದ ಸಚಿವರು ಸಬೂಬು ಹೇಳಿಕೊಂಡೆ ಕಾಲ ಕಳೆದಿದ್ದಾರೆ. ಆದರೆ, ಮತ್ತೊಮ್ಮೆ ನೌಕರರ ಸಂಘದ ಮುಂದಾಳತ್ವದಲ್ಲಿ ಸಾರಿಗೆ ನೌಕರರು ಹೋರಾಟಕ್ಕೆ ಇಳಿಯಲಿದ್ದಾರೆ. ಅದಕ್ಕೆ ನಾಡಿನ ಸಮಸ್ತ ಸಂಘಟನಗೆಳ ಬೆಂಬಲವೂ ಇದೆ ಎಂದು ಅರಿತ ಸಾರಿಗೆ ಸಚಿವರು ಶುಕ್ರವಾರ ಸಾರಿಗೆ ಕೇಂದ್ರ ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು 15ದಿನಗಳಲ್ಲಿ ನೌಕರರ ಏನು ವೇತನ ಹೆಚ್ಚಳ ಸಂಬಂಧ ಅಂತಿಮ ಮಾಹಿತಿ ನೀಡಲಿದ್ದು, ಅಲ್ಲಿಯವರೆಗೂ ನೌಕರರು ಯಾವುದೇ ಹೋರಾಟ ಮಾಡುವುದು ಬೇಡ, 15ದಿನಗಳೊಳಗೆ ನಾವು ವೇತನ ಹೆಚ್ಚಳ ಮಾಡದೆ ಹೋದರೆ ಹೋರಾಟ ಮಾಡಲಿ. ಈ ಬಗ್ಗೆ ನಿಮ್ಮ ನೌಕರರಿಗೆ ತಿಳಿಹೇಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ಮೂರು ವರ್ಷದಿಂದಲೂ ಗುಮ್ಮನೇ ಕೂತಿದ್ದ ಸರ್ಕಾರ ಮತ್ತು ಆಡಳಿತ ಮಂಡಳಿ ಅಧಿಕಾರಿಗಳ ಮೂಲಕ ಮತ್ತೊಮ್ಮೆ ನೌಕರರ ದಿಕ್ಕು ತಪ್ಪಿಸುವ ಕೆಲಸಕ್ಕೆ ಕೈಹಾಕುತ್ತಿದೆ ಎಂದು ನೊಂದ ನೌಕರರು ಕಿಡಿಕಾರುತ್ತಿದ್ದು. ಹೀಗಾಗಿ ಕಳೆದ ಮೂರು ವರ್ಷದಿಂದಲೂ ನಾವು ಯಾವುದೇ ವೇತನ ಹೆಚ್ಚಳವಿಲ್ಲದೆ ದುಡಿಯುತ್ತಿದ್ದೇವೆ. ಈ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದಿದ್ದರೆ ಈ ಭ್ರಷ್ಟ ಸರ್ಕಾರಕ್ಕೆ ಮತ್ತು ನೌಕರರ ಪರ ಎಂದು ಹೇಳಿಕೊಳ್ಳುವ ಈ ಸಾರಿಗೆ ಸಚಿವರು ನಾವು ಕೇಳುವ ಮೊದಲೇ ಹೆಚ್ಚಳ ಮಾಡುತ್ತಿದ್ದರು.
ಆದರೆ, ನಾವು ಕಳೆದ ಮೂರು ವರ್ಷದಿಂದಲೂ ವೇತನ ಹೆಚ್ಚಳ ಸಂಬಂಧ ಹೋರಾಟ ಮಾಡುತ್ತಿದ್ದರೂ ನಮ್ಮನ್ನು ಕಡೆಗಣಿಸಿಕೊಂಡೆ ಬಂದಿರುವ ಈ ಸರ್ಕಾರ ಈಗ ಮತ್ತೊಮ್ಮೆ ಸುಳ್ಳು ಭರವಸೆಯನ್ನು ಅಧಿಕಾರಿಗಳ ಮೂಲಕ ಕೊಡಿಸಲು ಹೊರಟಿದೆ. ಆದರೆ ನಾವು ಯಾವುದೇ ಕಾರಣಕ್ಕೂ ಈ ಧರಣಿಯನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ನೌಕರರು ಹೇಳಿದ್ದಾರೆ.