ಬೆಂಗಳೂರು: ಉದ್ಯಮಿ ಗೌತಮ್ ಅದಾನಿ ಹಗರಣಗಳಲ್ಲಿ ಕೇಂದ್ರ ಸರ್ಕಾರ ಶಾಮೀಲಾಗಿರುವ ಆರೋಪಕ್ಕೆ ಸಂಬಂಧಿಸಿ ರಾಜ್ಯ ಬಿಜೆಪಿ ಕಚೇರಿ ಎದುರು ಫೆಬ್ರವರಿ 12ರ ಭಾನುವಾರದಂದು ಬೃಹತ್ ಪ್ರತಿಭಟನೆ ನಡೆಸಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ ಎಂದು ರಾಜ್ಯ ಕಾರ್ಯದರ್ಶಿ ಮೋಹನ್ ದಾಸರಿ ತಿಳಿಸಿದ್ದಾರೆ.
ಆಮ್ ಆದ್ಮಿ ಪಾರ್ಟಿ ರಾಜ್ಯ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮಿ ಗೌತಮ್ ಅದಾನಿಯು ಲಕ್ಷಾಂತರ ಕೋಟಿ ರೂಪಾಯಿ ಮೊತ್ತದ ಹಗರಣ ಮಾಡಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಎಲ್ಲ ರೀತಿಯ ಸಹಕಾರ ನೀಡಿದೆ. ಇದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯು ಫೆಬ್ರವರಿ 12ರಂದು ದೇಶಾದ್ಯಂತ ಎಲ್ಲ ರಾಜ್ಯಗಳಲ್ಲೂ ಮಧ್ಯಾಹ್ನ 12 ಗಂಟೆಗೆ ಪ್ರತಿಭಟನೆ ನಡೆಸಲಿದೆ ಎಂದರು.
ನಮ್ಮ ಕರ್ನಾಟಕದಲ್ಲಿ ಕೂಡ ಅದೇ ಸಮಯಕ್ಕೆ, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಪಕ್ಷದ ರಾಜ್ಯ ಮುಖಂಡರು, ಅನೇಕ ಪದಾಧಿಕಾರಿಗಳು, ವಿಧಾನಸಭೆ ಚುನಾವಣೆಯ ಸ್ಪರ್ಧಾಕಾಂಕ್ಷಿಗಳು ಹಾಗೂ ಅನೇಕ ಕಾರ್ಯಕರ್ತರು, ಬೆಂಬಲಿಗರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಉದ್ಯಮಿ ಅದಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಸ್ನೇಹ ಎಲ್ಲರಿಗೂ ತಿಳಿದಿದೆ. 2014ರಲ್ಲಿ ಅಧಿಕಾರ ಸಿಕ್ಕಾಗಿನಿಂದಲೂ ಮೋದಿಯವರು ಅದಾನಿಯವರಿಗೆ ಬೇರೆಬೇರೆ ರೀತಿಯ ಸಹಾಯ ಮಾಡುತ್ತಲೇ ಬಂದಿದ್ದಾರೆ. ಈಗ ಹಿಂಡನ್‌ಬರ್ಗ್ ಸಂಸ್ಥೆಯಿಂದ ಬಯಲಿಗೆ ಬಂದಿರುವ ಹಗರಣದಿಂದಾಗಿ ಎಲ್‌ಐಸಿ, ಎಸ್‌ಬಿಐ ಮುಂತಾದ ಕಂಪನಿಗಳಿಗೆ ಆತಂಕ ಎದುರಾಗಿದೆ. ಸರ್ಕಾರಿ ಸ್ವಾಮ್ಯದ ಎಲ್‌ಐಸಿ ಹಾಗೂ ಎಸ್‌ಬಿಐನಲ್ಲಿದ್ದ ಜನಸಾಮಾನ್ಯರ ಹಣವನ್ನು ಕೇಂದ್ರ ಸರ್ಕಾರವು ಹೂಡಿಕೆ ಹಾಗೂ ಸಾಲದ ರೂಪದಲ್ಲಿ ಅದಾನಿ ಕಂಪನಿಗೆ ತಲುಪಿಸಿದೆ ಎಂದು ಮೋಹನ್ ದಾಸರಿ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ, ಅದಾನಿ, ಅಂಬಾನಿಯಂತಹ ಉದ್ಯಮಿಗಳಿಗೆ ಈ ರೀತಿ ಲಕ್ಷಾಂತರ ಕೋಟಿ ರೂಪಾಯಿ ಲಾಭ ಮಾಡಿಕೊಟ್ಟು, ಅವರಿಂದ ಪಕ್ಷದ ಖಾತೆಗೆ ಕೋಟ್ಯಂತರ ರೂಪಾಯಿ ದೇಣಿಗೆ ಪಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.
ಹೀಗೆ ಪಡೆದ ಹಣವನ್ನು ಚುನಾವಣೆ ವೇಳೆ ಮತದಾರರಿಗೆ ಆಮಿಷವೊಡ್ಡಲು ಹಾಗೂ ಚುನಾವಣೆಯಲ್ಲಿ ಬಹುಮತ ಬಾರದಿದ್ದರೆ ಆಪರೇಷನ್ ಕಮಲ ಮಾಡಲು ಬಿಜೆಪಿ ಬಳಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಈ ಪ್ರತಿಭಟನೆಯನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಬೇಕು ಎಂದು ಕರೆ ನೀಡಿದರು.