ಹನೂರು: ಜಾನಪದವಾಗಿ, ಸಾಂಸ್ಕೃತಿಕವಾಗಿ, ಅತ್ಯಂತ ಶ್ರೀಮಂತಿಕೆಯನ್ನು ಹೊಂದಿರುವ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಸಂಶೋಧನಾ ಗ್ರಂಥಗಳು ಹೊರಬರುವ ಮೂಲಕ ಈ ಜಿಲ್ಲೆಯ ಪರಂಪರೆಯು ಮುಂದಿನ ಪೀಳಿಗೆಗೆ ದೊರೆಯುವಂತಾಗಲಿ ಎಂದು ಶಾಸಕ ಆರ್. ನರೇಂದ್ರ ಹೇಳಿದರು.
ಹನೂರು ತಾಲೂಕಿನ ರಾಮಾಪುರ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಹನೂರು ತಾಲೂಕು ಎರಡನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ನಮ್ಮ ಜನಪದರ ಸ್ಮೃತಿಪಟಲ ಮೆಚ್ಚುವಂತದ್ದು, ಮಲೆ ಮಹದೇಶ್ವರರು, ಮಂಟೇಸ್ವಾಮಿ, ರಾಚಪ್ಪಾಜಿ ಸಿದ್ದಪ್ಪಾಜಿ ಮುಂತಾದ ಪವಾಡ ಪುರುಷರು ನಡೆದಾಡಿದ ಈ ನೆಲದಲ್ಲಿ ಜನಪದರು ಪುಣ್ಯ ಪುರುಷರ ಮಹಿಮೆಯನ್ನು ನಿರರ್ಗಳವಾಗಿ ರಾಗಬದ್ಧವಾಗಿ ಆಡುತ್ತಾ ಬಂದಿದ್ದರು. ಇಂತಹ ಮೌಖಿಕ ಕಾವ್ಯವನ್ನು ಕೃತಿ ರೂಪಕ್ಕೆ ಸಂಗ್ರಹಿಸಿದ ಕೀರ್ತಿ ನಮ್ಮ ಈ ನೆಲದ ಕವಿ, ಲೇಖಕರು, ಕಾದಂಬರಿಕಾರರದ್ದಾಗಿದೆ. ಕಂಸಾಳೆ, ತಂಬೂರಿ, ನೀಲಗಾರರ ಪರಂಪರೆಯನ್ನು ಕಟ್ಟಿಕೊಟ್ಟಿದ್ದಾರೆ.
ಕೃಷ್ಣಮೂರ್ತಿ ಹನೂರು, ಶಂಕನಪುರ ಮಹದೇವ, ಪಿ.ಕೆ. ರಾಜಶೇಖರ್ ಇನ್ನಿತರರು ಈ ನಿಟ್ಟಿನಲ್ಲಿ ನೆಲದ ಮಹಿಮೆಯನ್ನು ಸಾರಿದ್ದಾರೆ. ಡಾ.ರಾಜಕುಮಾರ್ ಹಾದಿಯಾಗಿ ಅನೇಕ ಕವಿ, ಲೇಖಕರು, ಸಾಹಿತಿಗಳು ಕಾದಂಬರಿಕಾರರು, ಚಲನಚಿತ್ರ ನಿರ್ದೇಶಕರು ರಾಜ್ಯ ದೇಶಾದ್ಯಂತ ಪ್ರಸಿದ್ಧಿಯಾಗಿದ್ದಾರೆ. ರಾಜ್ಯದ ಗಡಿ ಹಾಗೂ ತಮಿಳು ಭಾಷೆಯ ಪ್ರಾಬಲ್ಯವನ್ನು ಹೊಂದಿರುವ ಈ ನೆಲದಲ್ಲಿ ಇಂತಹ ಕನ್ನಡಪರ ಸಾಹಿತ್ಯ ಸಮ್ಮೇಳನಗಳು ಹೆಚ್ಚು ಹೆಚ್ಚು ನಡೆಯಬೇಕು.
ಈ ಹಿಂದೆ ಮಾರ್ಟಳ್ಳಿ, ಗೋಪಿನಾಥಂ ಇನ್ನಿತರ ಗಡಿ ಭಾಗಗಳಲ್ಲಿ ಕನ್ನಡ ಮಾತನಾಡುವವರು ತೀರ ಕಡಿಮೆ ಇದ್ದರು. ಸರ್ಕಾರಿ ಶಾಲೆಗಳ ಮೂಲಕ ಕನ್ನಡ ಭಾಷೆಯನ್ನು ಕಲಿಸುವ ಮೂಲಕ ಕನ್ನಡ ಭಾಷೆ ಉಳಿಯುವಂತಾಗಿದೆ. ನಗರ ಪ್ರದೇಶಗಳಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಇದನ್ನು ಮೊದಲು ಬಿಡಬೇಕು.
ಬೇರೆ ಭಾಷೆಗಳ ಬಗ್ಗೆ ಗೌರವವಿರಲಿ ಆದರೆ ನಮ್ಮ ಕನ್ನಡವನ್ನು ಹೆಚ್ಚು ಗೌರವಿಸಿ ಪ್ರೀತಿಸುವ ಕೆಲಸ ಆಗಬೇಕು ಎಂದ ಶಾಸಕ ಆರ್. ನರೇಂದ್ರ, ಜಿಲ್ಲೆ ಹಿಂದುಳಿದ ಜಿಲ್ಲೆ ಎಂಬ ಹಣ ಪಟ್ಟಿಯನ್ನು ಕಳೆಚಿ ಮುಂದುವರಿದ ಜಿಲ್ಲೆಯಾಗಿ ರೂಪುಗೊಂಡಿದೆ. ಶೈಕ್ಷಣಿಕವಾಗಿ ಗಮನಾರ್ಹ ಸಾಧನೆಯನ್ನು ಸಾಧಿಸಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರು ಜ್ಞಾನ ಗಂಗೋತ್ರಿ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಕ್ಷ ಮತ್ತು ಪ್ರಾಧ್ಯಾಪಕರಾದ ಡಾ.ನಾಗಣ್ಣ ನೇರವೇರಿಸಿದರು.
ಸಮ್ಮೇಳನದ ಸರ್ವಧ್ಯಕ್ಷರಾದ ಸು. ಬಸವರಾಜು ದೊಡ್ಡಟ್ಟಿ ಸಮ್ಮೇಳನ ಅಧ್ಯಕ್ಷರ ನುಡಿಗಳನ್ನಾಡಿ, ಜಾನಪದ ಸಾಮ್ರಾಜ್ಯದವರಾದ ಮಂಟೇಸ್ವಾಮಿ, ಬಿಳಿಗಿರಿ ರಂಗನಾಥ, ರಾಚಪ್ಪಾಜಿ, ನೀಲಿ ಸಿದ್ದಪ್ಪಾಜಿ, ಮಲೆ ಮಹದೇಶ್ವರರು ನೆನೆದು ಭವಿಷ್ಯದ ಬರಹಗಾರರು ರೂಪುಗೊಳ್ಳಬೇಕಾದ ಅನಿವಾರ್ಯತೆಯನ್ನು ಅರಿಯಬೇಕು.
ಯಾವ ಬರಹಗಾರ ತನ್ನ ಪರಂಪರೆಯನ್ನು ನೆನೆದು ತೊಡಗುವುದಿಲ್ಲವೋ ಆತನಿಂದ ಆ ಸಮಾಜಕ್ಕೆ ಉತ್ತಮ ಸಾಹಿತ್ಯದ ನಿರೀಕ್ಷೆಯನ್ನು ಕಾಣಲಾಗದು. ಈ ಹಿನ್ನೆಲೆಯಲ್ಲಿ ಈ ಪ್ರದೇಶದ ಬರಹಗಾರರು ತಾವು ಪಡೆದುಕೊಂಡ ಅನುಭವಗಳನ್ನು ತಮ್ಮ ಸಾಹಿತ್ಯದ ಬಂಡವಳನ್ನಾಗಿಸಿ ಕೊಳ್ಳುವ ಬುದ್ಧಿವಂತರಾದರೆ ಈ ಪ್ರದೇಶದ ಸಹಜತೆಯನ್ನು ಸರ್ಕಾರಕ್ಕೆ ತಿಳಿಯುವಂತೆ ಮಾಡಿ ಅದರಿಂದ ಸಾಮಾಜಿಕ ಅಭಿವೃದ್ಧಿಗೆ ಪಾಯ ಹಾಕಿದಂತೆ ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯ ಕೇವಲ ಪುಸ್ತಕದ ರೂಪವಲ್ಲ. ಸಾಹಿತ್ಯ ಆಯಾ ಪ್ರದೇಶದವರ ಜೀವನ, ಪ್ರತಿಬಿಂಬ, ಕಲೆ, ಭಾಷೆ, ಭಾವನೆ, ಬದುಕಿನ ವೈವಿಧ್ಯತೆಗಳನ್ನು ಅರ್ಥವಾದಾಗಿಸುವ ಜ್ಞಾನದ ಸಾರವಾಗಿ ನಮ್ಮ ಪೂರ್ವಜರ ಗೊತ್ತು ಗುರಿಗಳನ್ನು ಅರಿಯುವ ಕೆಲಸವಾಗಬೇಕು. ರಾಮಪುರ ಇತಿಹಾಸದ ಬಗ್ಗೆ ಹೇಳುವುದಾದರೆ ಶ್ರೀ ರಾಮನ ಪಾದಸ್ಪರ್ಷದಿಂದ ರಾಮಾಪುರವಾಗಿದೆ. ಸೀತಾನ್ವೇಶಣೆಯಲ್ಲಿದ್ದ ರಾಮ ಇಲ್ಲಿನ ಅಗಸ್ತ್ಯ ಋಷಿಗಳಿಗೆ ನಿಜರೂಪ ತೋರಿದ ಸ್ಥಳವೇ ಇಂದಿನ ದರ್ಶನ ಗೂಡು, ಋಷಿಗಳ ನೆಲೆಸಿರುವ ಗುಹೆ ಇರುವ ಗುಡ್ಡವೇ ಗೆಜ್ಜಲಗುಡ್ಡೆ ಎಂದು ತಿಳಿಸಿದರು.
ನಮ್ಮ ಊರು ಮೈಸೂರು ಅರಮನೆಯಲ್ಲಿ ಪ್ರಭಾವ ಹೊಂದಿತ್ತು. ಮೈಸೂರಿನಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಅರಸರು ಬಳಸುತ್ತಿದ್ದ ಈ ರಾಮಪುರದ ಮಾರ್ಗವನ್ನು ರಾಜಮಾರ್ಗ ಎಂದು ಕರೆಯಲಾಗುತ್ತಿತ್ತು. ಸರ್ಕಾರ ಈ ರಾಜಮಾರ್ಗವನ್ನು ನೆನೆಸಿಕೊಂಡರೆ ಇತಿಹಾಸ ತೆರೆಯುತ್ತದೆ. ಈ ನೆಲದ ಗಟ್ಟಿತನ ಎಂದರೆ ಇಲ್ಲಿನವರ ಆಚಾರ ವಿಚಾರಗಳು.
ಈ ಜನ ತಮ್ಮ ಸಂಸ್ಕೃತಿ ನಾಗರಿಕತೆಗಳಿಂದ ಒಂದು ಸಂಪನ್ನವಾದ ಪರಂಪರೆಯನ್ನು ಹೊಂದಿದ್ದು, ಮೊದಲಿನಿಂದಲೂ ತಮಿಳುನಾಡಿನ ಪ್ರಭಾವಕ್ಕೆ ಮಾರುಹೋಗಿ ದ್ರಾವಿಡ ವಾಂಛೆಯಲ್ಲಿ ಸಿಲುಕಿ ಶರಣ ಧರ್ಮಕ್ಕೆ ಪಕ್ಕವಾಗಿರುವವರು. ಆದರೂ ತಮ್ಮ ಮಾತೃಭಾಷೆಯದ ಕನ್ನಡವನ್ನು ಮರೆತಿರುವವರಲ್ಲ. ಆದರೆ ಇದನ್ನು ಸರ್ಕಾರಗಳು ತಿಳಿದಿಲ್ಲ. ಇಂತಹ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವ ಕಾರ್ಯಗಳು ನಮ್ಮ ಪೂರ್ವದ ಗಡಿಭಾಗಕ್ಕೆ ಒದಗುತ್ತಿರುವ ಶುಭ ಸೂಚನೆಯಾಗಿದೆ.
ಈ ಪ್ರದೇಶ ಎರಡು ರಾಜ್ಯಗಳಿಗೆ ಇರುವ ಕೊಂಡಿ ಎಂಬ ಅರಿವು ಸರ್ಕಾರಕ್ಕೆ ತಿಳಿದಿದ್ದರೆ ಚಂದ. ಗಡಿಭಾಗದ ಗ್ರಾಮಗಳು ಸೌಕರ್ಯವನ್ನು ಪಡೆಯಲು ಪೂರ್ಣ ರೀತಿಯ ಸಫಲತೆಯನ್ನು ಹೊಂದಿಲ್ಲ. ಅದು ರಸ್ತೆ, ವಿದ್ಯಾಭ್ಯಾಸ, ಆರೋಗ್ಯ, ವಾಹನ ಸೌಲಭ್ಯ, ನಿರ್ಮಲೀಕರಣ ಹಾಗೂ ಜನಸಮೂಹಕ್ಕೆ ತಕ್ಕಂತೆ ಊರಿನ ಆಡಳಿತದಲ್ಲಿ ಉನ್ನತ ಉನ್ನತೀಕರಣವಾಗಿಲ್ಲ. ಅದನ್ನು ಕ್ರಮವಾಗಿ ಸರ್ಕಾರ ಕಾಲಕ್ಕೆ ತಕ್ಕಂತೆ ಬದಲಾಯಿಸುವ ಕೆಲಸವಾಗಬೇಕು.
ಒಟ್ಟಾರೆ ನಮ್ಮ ವಚನಕಾರರು, ದಾಸರು, ಶ್ರೇಷ್ಠ ಕವಿಗಳು, ಸರ್ವಜ್ಞರು ತೋರಿರುವ ಮಾರ್ಗದರ್ಶನ ಸಾಹಿತ್ಯದಿಂದ ಇಂತಹ ಸಾಹಿತ್ಯ ಸಮ್ಮೇಳನಗಳ ಕ್ರಿಯಾ ಸ್ವರೂಪಗಳಿಂದ ಹೆಚ್ಚಿನ ಪ್ರಯೋಜನಗಳು ಕನ್ನಡಿಗರಿಗೆ ದೊರೆಯುತ್ತಾ, ನಾಡಿಗರನ್ನು ಉತ್ತಮ ನಾಗರಿಕರನ್ನಾಗಿ ಜನ್ಮ ತಳಿಯಲು ನಮ್ಮ ಆಡಳಿತ ವರ್ಗ ಅಧಿಕಾರಿಗಳು ಜನಪ್ರತಿನಿಧಿಗಳು ಸಮ್ಮಿಲಿತರಾಗಿ ಚರ್ಚಿಸಿ ಯೋಜನೆಗಳನ್ನು ರೂಪಿಸಿದಾಗ ನಮ್ಮ ಭಾಷೆ, ನೆಲ, ಜನ, ಚರಿತ್ರೆ, ಸಾಹಿತ್ಯವೆಲ್ಲ ಬೆಳೆದು ನಾಡು ಸುಭಿಕ್ಷತೆಯಾಗುತ್ತದೆ. ಈ ದ್ವಾರದಲ್ಲಿನ ಸಾಹಿತ್ಯ ಸೇವೆಗೆ ಬೆಲೆ ಉಂಟಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶೈಲೇಶ್ ಕುಮಾರ್, ಪಪಂ ಉಪಾದ್ಯಕ್ಷರಾದ ಗಿರೀಶ್ ಹನೂರು ತಾಲೂಕು ಕಸಪ ಅಧ್ಯಕ್ಷರಾದ ಮಲ್ಲೇಶ ಮಹಾಲಿಂಗನ ಕಟ್ಟೆ, ಕೋಶದ್ಯಕ್ಷರಾದ ಆಶೋಕ್ ಕಾರ್ಯದರ್ಶಿ ಅಭಿಲಾಷ್
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಬಸವರಾಜು, ಹನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹದೇಶ್, ಕನ್ನಡಪರ ಹೋರಾಟಗಾರ ವಿನೋದ್ ಕುಮಾರ್, ನಿವೃತ್ತ ಸೈನಿಕ ಗಂಗಾಧರ್, ಶಿಕ್ಷಕರಾದ ಪ್ರಧೀಪ್ ಇನ್ನಿತರರು ಉಪಸ್ಥಿತರಿದ್ದರು.
ವಿಚಾರಗೋಷ್ಠಿ: ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ರಂಗಸ್ವಾಮಿ ಮಾತನಾಡಿ, ನಾವು ಎಲ್ಲೇ ಇದ್ದರೂ ಕನ್ನಡವಾಗಿರಬೇಕು. ಕನ್ನಡದ ಮೇಲೆ ಗೌರವ ಪ್ರೀತಿ ಇರಬೇಕು. ಹನೂರು ತಾಲೂಕು ಆಚಾರ, ವಿಚಾರ, ಸಂಸ್ಕೃತಿಯಲ್ಲಿ ತನ್ನದೇ ಆದ ವೈಶಿಷ್ಟತೆಯಿಂದ ಕೂಡಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹನೂರು ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ಕೃಷಿಕರ ಹಾಡು ಪಾಡು ವಿಷಯದ ಬಗ್ಗೆ ವಿಷಯ ಮಂಡನೆ ಮಾಡಿದರು. ಚಲನಚಿತ್ರ ನಿರ್ದೇಶಕ ಸತೀಶ್ ಪೊನ್ನಾಚಿ ಸಮಕಾಲಿನ ಸಾಹಿತ್ಯದ ತಲ್ಲಣಗಳು ಎಂಬ ವಿಷಯದ ಬಗ್ಗೆ ಮಾತನಾಡಿದರು.
ಗಮನ ಸೆಳೆದ ಮೆರವಣಿಗೆ : ಹನೂರು ತಾಲೂಕು 2 ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಮೆರವಣಿಗೆ ಕಾರ್ಯಕ್ರಮ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ದ್ರಾಕ್ಷಾಯಿಣಿ ನೆರವೇರಿಸಿದರು. ಸಮ್ಮೇಳನದ ಸರ್ವಧ್ಯಕ್ಷರಾದ ಸು. ಬಸವರಾಜು ದೊಡ್ಡಟ್ಟಿ ಅವರನ್ನು ಮಹದೇಶ್ವರ ದೇವಾಲಯದ ಆವರಣದಿಂದ ವಿವಿಧ ಕಲಾ ತಂಡಗಳೊಂದಿಗೆ ಸಭಾ ಮಟ್ಟಕ್ಕೆ ಕರೆತರಲಾಯಿತು.
ರಾಮಪುರ ಮಹದೇಶ್ವರ ದೇವಸ್ಥಾನದಿಂದ ಹೊರಟ ಸಮ್ಮೇಳ ಪ್ರಮುಖ ಬೀದಿಗಳಲ್ಲಿ ಸಾಗಿ ಮಹದೇಶ್ವರ ಕಲ್ಯಾಣ ಮಂಟಪವನ್ನು ತಲುಪಿತು. ಈ ವೇಳೆ ಸರ್ವಾಧ್ಯಕ್ಷರನ್ನು ಗೌರವಯುತವಾಗಿ ಕರೆ ತರಲಾಯಿತು. ಮೆರವಣಿಗೆ ಉದ್ದಕ್ಕೂ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಕಲಾಪ್ರದರ್ಶನ ಸಾದರ ಪಡಿಸಿದರು. ಹೆಣ್ಣು ಮಕ್ಕಳು ಪೂರ್ಣ ಕುಂಭದೊಂದಿಗೆ ಸಾಗಿದರು. ಎಲ್ಲಡೆ ಕನ್ನಡ ಬಾವುಟಗಳು ರಾರಾಜಿಸಿದವು.