ಬೆಂಗಳೂರು: ನ್ಯಾಷನಲ್ ಹೆಲ್ತ್ ಮಿಷನ್ ಗುತ್ತಿಗೆ ನೌಕರರು ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿದ್ದ ಪ್ರತಿಭಟನೆಗೆ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಪಕ್ಷದ ಮುಖಂಡರೊಂದಿಗೆ ಭೇಟಿ ನೀಡಿ, ಕರ್ನಾಟಕದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ 30 ದಿನಗಳೊಳಗೆ ಅವರ ಉದ್ಯೋಗವನ್ನು ಕಾಯಂಗೊಳಿಸುವುದಾಗಿ ಘೋಷಿಸಿದರು.
ಪ್ರತಿಭಟನಾನಿರತ ಎನ್‌ಎಚ್‌ಎಂ ನೌಕರರನ್ನು ಉದ್ದೇಶಿಸಿ ಮಾತನಾಡಿದ ಪೃಥ್ವಿ ರೆಡ್ಡಿ, ಜನರ ನೆನಪು ಚಿಕ್ಕದಾಗಿರುತ್ತದೆ ಎಂದು ನಾವೆಲ್ಲ ಕೇಳಿದ್ದೆವು. ಆದರೆ ಒಂದು ಸರ್ಕಾರದ ನೆನಪು ಇಷ್ಟು ಚಿಕ್ಕದಾಗಿರುತ್ತದೆ ಎಂದು ನಾವೆಂದೂ ಊಹಿಸಿರಲಿಲ್ಲ. ಕೇವಲ ಮೂರು ವರ್ಷದ ಹಿಂದೆ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಸುರಿಸಿ ನಿಮಗೆಲ್ಲ ಗೌರವ ಸಲ್ಲಿಸಿದ್ದರು.
ಕೋವಿಡ್ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ಜನರು ಮನೆಯಿಂದ ಹೊರಬರುವುದು ಅಪಾಯಕಾರಿಯಾಗಿದ್ದ ಸಂದರ್ಭದಲ್ಲಿ, ನೀವೆಲ್ಲ ನಮ್ಮ ಜೀವವನ್ನು ಉಳಿಸಿದ್ದೀರಿ. ಪ್ರಧಾನಿ ಹೇಳಿದರೆಂದು ಅಂದು ನಾವು ನಿಮಗೋಸ್ಕರ ದೀಪ ಹಚ್ಚಿದ್ದು ಇನ್ನೂ ನೆನಪಿದೆ. ಮೂರೇ ಮೂರು ವರ್ಷಗಳ ಹಿಂದೆ ದೇವರಂತಿದ್ದ ಜನರನ್ನು ಈಗ ದಾಸರನ್ನಾಗಿ ಮಾಡಿ ಇಲ್ಲಿ ಕೂರಿಸಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಹೇಳಿದರು.
“ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸುಧಾರಿಸಿಲ್ಲ. ಹಣವಿಲ್ಲದ ಜನರೂ ಖಾಸಗಿ ಆಸ್ಪತ್ರೆಗೆ ಹೋಗುವಂತಾಗಿದೆ. ಕಾಯಿಲೆಯಿಂದ ಸಾಯದವರು ಅಲ್ಲಿನ ಬಿಲ್‌ನಿಂದ ಸಾಯುವಂತಾಗಿದೆ. ಇಡೀ ದೇಶದ ಜನರು ತೆರಿಗೆ ಕಟ್ಟುತ್ತಿದ್ದಾರೆ. ಬೆಂಕಿಪೊಟ್ಟಣದಿಂದ ಪೆಟ್ರೋಲ್ ತನಕ ಎಲ್ಲದಕ್ಕೂ ನಾವು ತೆರಿಗೆ ಕಟ್ಟುತ್ತಿದ್ದೇವೆ. ಇದಕ್ಕೆ ಪ್ರತಿಯಾಗಿ ಜನರಿಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ನೀಡಬೇಕಿರುವುದು ಸರ್ಕಾರದ ಜವಾಬ್ದಾರಿ.
ಆದರೆ ನಾವು ಕಟ್ಟುತ್ತಿರುವ ತೆರಿಗೆಯು ಯಾರದ್ದೋ ಜೇಬು ಸೇರುತ್ತಿದೆ. ನಮ್ಮ ತೆರಿಗೆ ಹಣದಿಂದ ಅವರು ಅರಮನೆ ಕಟ್ಟಿಕೊಳ್ಳುತ್ತಿದ್ದಾರೆ. ಆದ್ದರಿಂದ ನಿಮ್ಮ ಉದ್ಯೋಗವನ್ನು ಖಾಯಂಗೊಳಿಸಲು ಅವರು ಹಣವಿಲ್ಲ ಎನ್ನುತ್ತಾರೆ ಎಂದು ಪೃಥ್ವಿ ರೆಡ್ಡಿ ಹೇಳಿದರು.
“ಆಮ್ ಆದ್ಮಿ ಪಾರ್ಟಿಯು ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್‌ಗಳನ್ನು ಸ್ಥಾಪಿಸಿದ್ದನ್ನೇ ನಕಲು ಮಾಡಿ ಇಲ್ಲಿ ನಮ್ಮ ಕ್ಲಿನಿಕ್ ಸ್ಥಾಪಿಸಿದ್ದಾರೆ. ನಾವು ದೆಹಲಿಯಂತಹ ಸಣ್ಣ ನಗರದಲ್ಲಿ ಈಗಾಗಲೇ 500 ಮೊಹಲ್ಲಾ ಕ್ಲಿನಿಕ್ ತೆರೆದು, ಇನ್ನೂ 500 ಮೊಹಲ್ಲಾ ಕ್ಲಿನಿಕ್ ತೆರೆಯಲು ಯೋಜನೆ ರೂಪಿಸಿದ್ದೇವೆ. ಇಲ್ಲಿ ಅದರ ಅರ್ಧದಷ್ಟೂ ತೆರೆದಿಲ್ಲ. ದೆಹಲಿಯಲ್ಲಿ ಒಂದುವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಕೊಡಿಸಲು ಸಾಧ್ಯವಾಗದಿದ್ದರೆ, ಸರ್ಕಾರವು ಖಾಸಗಿಯಲ್ಲಿ ಚಿಕಿತ್ಸೆ ಕೊಡಿಸಿ ಬಿಲ್ ಪಾವತಿಸುತ್ತಿದೆ.
ಕರ್ನಾಟಕದ ಜನರೂ ಅಷ್ಟೇ ತೆರಿಗೆ ಕಟ್ಟುತ್ತಿದ್ದರೂ ನಮಗೆ ಯಾಕೆ ಆ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಪ್ರಶ್ನಿಸಬೇಕಿದೆ. ದೆಹಲಿ ಸರ್ಕಾರವು ಆರೋಗ್ಯಕ್ಕೆ 16% ಖರ್ಚು ಮಾಡುತ್ತಿದ್ದರೆ, ಕರ್ನಾಟಕ ಸರ್ಕಾರವು ಕೇವಲ 4% ಖರ್ಚು ಮಾಡುತ್ತಿದೆ. ಕರ್ನಾಟಕ ಸರ್ಕಾರವು ಪ್ರತಿ ನಮ್ಮ ಕ್ಲಿನಿಕ್‌ಗೆ ಇಡೀ ವರ್ಷಕ್ಕೆ ಕೇವಲ 36 ಲಕ್ಷ ಹಣವನ್ನು ಮಾತ್ರ ಮೀಸಲಿಟ್ಟಿದೆ. ಇದು ಅಲ್ಲಿರುವ ಐದು ಮಂದಿಯ ಸಂಬಳ ಹಾಗೂ ಬಾಡಿಗೆಗೇ ಸಾಕಾಗುವುದಿಲ್ಲ. ಹೀಗಿರುವಾಗ, ಹೇಗೆ ಉಚಿತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ?” ಎಂದು ಪೃಥ್ವಿ ರೆಡ್ಡಿ ಪ್ರಶ್ನಿಸಿದರು.
ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ, ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ, ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.