ಬೆಂಗಳೂರು: ನೌಕರರ ಕೊರತೆ, ಕರ್ತವ್ಯ ನಿರ್ವಹಣೆ ಒತ್ತಡದ ನಡುವೆ ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಕನಿಷ್ಠ ವೇತನ ಪಡೆದು ಕುಟುಂಬ ನಿರ್ವಹಣೆ ಮಾಡುವುದು ಕಷ್ಟ ಸಾಧ್ಯವಾಗುತ್ತಿರುವುದರಿಂದ ಖಿನ್ನತೆಗೆ ಜಾರುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಬದುಕು ಪ್ರಸ್ತುತ ದಿನಗಳಲ್ಲಿ ಅನಿಶ್ಚಿತತೆಯ ಸುಳಿಗೆ ಸಿಲುಕುತ್ತಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ಅಭಿವೃದ್ಧಿ ಪಥದ ಸಂಕೇತವಾಗಿವೆ. ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಬಿಎಂಟಿಸಿ ಮತ್ತು ವಾಯುವ್ಯ ಸೇರಿ ರಾಜ್ಯದಲ್ಲಿ ಈ ಹಿಂದೆ ಸುಮಾರು 1.25 ಲಕ್ಷ ನೌಕರರು ಇದ್ದರು ಪ್ರಸ್ತುತ ಈ ಸಂಖ್ಯೆ ಗಣನೀಯವಾಗಿ ಕುಸಿದಿದ್ದು ಈಗ ಸುಮಾರು 1.12 ಲಕ್ಷ ಅಧಿಕಾರಿಗಳು ಮತ್ತು ನೌಕರರಿದ್ದಾರೆ.
ಇವರೆಲ್ಲ ನಾನಾ ಹಂತದಲ್ಲಿ ನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಂದೆ, ತಾಯಿ, ಹೆಂಡತಿ, ಮಕ್ಕಳು ಇಡೀ ಕುಟುಂಬವನ್ನು ಬಿಟ್ಟು ಹಗಲಿರುಳೆನ್ನದೆ ಜೀವದ ಹಂಗು ತೊರೆದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ತಲುಪಿಸುವಲ್ಲಿ ನಿರತರಾಗಿದ್ದಾರೆ.
ಪ್ರಸ್ತುತ ಸಂಸ್ಥೆಯಲ್ಲಿ ಕರ್ತವ್ಯ ನಿರತ ಬಹುತೇಕ ಸಿಬ್ಬಂದಿ ಸ್ಥಿತಿವಂತರಲ್ಲ. ಕುಟುಂಬ ನಿರ್ವಹಣೆ ಹಾಗೂ ತುತ್ತಿನ ಚೀಲ ತುಂಬಿಕೊಳ್ಳಲು ಬಂದ ಬಹುತೇಕರು ಮಧ್ಯಮ ವರ್ಗ, ಕೃಷಿ ಇಲ್ಲವೇ ಬಡ ಕುಟುಂಬದ ಹಿನ್ನೆಲೆ ಹೊಂದಿದವರಾಗಿದ್ದಾರೆ. ಹೀಗಾಗಿ ಇವರೆಲ್ಲರೂ ಸಂಸ್ಥೆಯ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾರೆ.
ಈ ನಡುವೆ ಇಚ್ಛಾಶಕ್ತಿ ಕೊರತೆಯಿಂದ ಸಾರಿಗೆ ಸಂಸ್ಥೆಗಳು ಹತ್ತಾರು ಸಮಸ್ಯೆಗೆ ಸಿಲುಕಿಕೊಳ್ಳುತ್ತಿದೆ. ಕೊರೊನಾದಿಂದ ಆದಾಯ ಕುಸಿತವಾಯಿತು. ಮತ್ತೊಂದು ಕಡೆ ಇದೇ ಸಮಯಕ್ಕೆ ಬಿಡಿಭಾಗಗಳು, ಇಂಧನ ಹಾಗೂ ಇತರ ವಸ್ತುಗಳ ಬೆಲೆ ಕೂಡ ಏರಿಕೆ ಕಂಡಿತು. ಇನ್ನು ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಬ್ಬಂದಿ ನಡೆಸಿದ ಮುಷ್ಕರ ಸೇರಿ ಸಾರಿಗೆ ಸಂಸ್ಥೆಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಒಂದಿಲ್ಲೊಂದು ಕಷ್ಟವನ್ನು ಎದುರಿಸುತ್ತಿದೆ. ಇದು ನೇರವಾಗಿ ಸಂಸ್ಥೆಯ ನೌಕರರ ಮೇಲೆ ಪರಿಣಾಮ ಬಿರುತ್ತಿದೆ.
ಈ ಎಲ್ಲದರ ನಡುವೆ ನಿವೃತ್ತರಾಗುತ್ತಿರುವ ಸಿಬ್ಬಂದಿ ಜಾಗಕ್ಕೆ ಮತ್ತೆ ಹೊಸ ನೌಕರರನ್ನು ತೆಗೆದುಕೊಳ್ಳದ ಕಾರಣ ಈಗ ಸಂಸ್ಥೆಗಳು ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಕಳೆದ ಕೆಲ ವರ್ಷಗಳಿಂದ ಚಾಲಕ, ನಿರ್ವಾಹಕ, ತಾಂತ್ರಿಕ ಹಾಗೂ ಇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ನನೆಗುದಿಗೆ ಬಿದ್ದಿದೆ.
ಇನ್ನು ಸರ್ಕಾರ ಮತ್ತು ಸಂಸ್ಥೆಯ ವಿಳಂಬ ನೀತಿಯಿಂದ ಸಿಬ್ಬಂದಿಗೆ ನಿತ್ಯವೂ ಕರ್ತವ್ಯದ ಭಾರ ಹೆಚ್ಚುತ್ತಿದೆ. ಬೆಳಗಾದರೆ ಸಾಕು ಸಿಬ್ಬಂದಿ ಯಂತ್ರದ ಜತೆಗೆ ತಾವೂ ಯಂತ್ರವಾಗಿಯೇ ಕರ್ತವ್ಯ ನಿರ್ವಹಿಸಬೇಕಿದೆ. ವಿಶ್ರಾಂತಿ ರಹಿತ ಕರ್ತವ್ಯ, ಅಕಾಲಿಕ ಆಹಾರ ಸೇವನೆ, ನಿದ್ದೆಗೆಡುವುದರಿಂದ ಸಿಬ್ಬಂದಿ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಆದರೂ ಡ್ಯೂಟಿಗೆ ಬರಲೇ ಬೇಕು ಎಂಬ ಡಿಎಂಗಳ ಒತ್ತಡವೂ ಇದೆ.
ಇದರಿಂದಾಗಿ ಇತ್ತೀಚೆಗೆ ಮಧ್ಯ ವಯಸ್ಕ ಸಿಬ್ಬಂದಿ, ಅದರಲ್ಲೂ ಚಾಲಕ, ನಿರ್ವಾಹಕರು ಕರ್ತವ್ಯ ನಿರ್ವಹಣೆಯಲ್ಲಿಯೇ ಹೃದಯಾಘಾತದಂತಹ ಅಕಾಲಿಕ ರೋಗಗಳಿಗೆ ಹೆಚ್ಚು ತುತ್ತಾಗುತ್ತಿದ್ದಾರೆ. ಇದರಿಂದ ಅದೆಷ್ಟೋ ಕುಟುಂಬಗಳು ಅನಾಥವಾಗಿವೆ. ಆದರೂ ಸರ್ಕಾರ ಈ ನೌಕರರ ಬಗ್ಗೆ ಎಳ್ಳಷ್ಟು ತಲೆಕಡಿಸಿಕೊಂಡಿಲ್ಲದಿರುವುದು ದುರಂತ.
ಇನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಸರ್ಕಾರ ಮನಸೋ ಇಚ್ಛೆ ನಿಗದಿ ಮಾಡುತ್ತಿದ್ದ ವೇತನ ಪರಿಷ್ಕರಣೆಯೂ ಕೊರೊನಾ, ನೌಕರರ ಮುಷ್ಕರದ ನೆಪ್ಪವೊಡ್ಡಿ ಕಳೆದ 2020ರಿಂದ ಕೋಮಾ ಸ್ಥಿತಿ ತಲುಪಿದೆ. ಇದೀಗ ಮತ್ತೊಂದು ವೇತನ ಪರಿಷ್ಕರಣೆ ಅವಧಿ ಬಂದಿದೆ. ಆದರೂ ಸರ್ಕಾರ ಮತ್ತು ಸಾರಿಗೆ ಸಂಸ್ಥೆ ಈವರೆಗೂ ವೇತನ ಹೆಚ್ಚಳ ಮಾಡದೆ ಮೂಗಿಗೆ ತುಪ್ಪ ಸವರುತ್ತಿದೆ.
ಈ ಬಗ್ಗೆ ಸಿಟ್ಟಿದ್ದರೂ ನೋವನ್ನು ಹೊರಹಾಕಲಾಗ ಸ್ಥಿತಿಯಲ್ಲಿರುವ ನೌಕರರು ಇಷ್ಟವಿಲ್ಲದಿದ್ದರೂ ಕುಟುಂಬ ನಿರ್ವಹಣೆಗಾಗಿ ಕಡಿಮೆ ಸಂಬಳದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದುಬಾರಿ ದಿನ, ನಿತ್ಯ ಬೆಲೆ ಏರಿಕೆಯ ಇಂದಿನ ವ್ಯವಸ್ಥೆಯಲ್ಲಿ ಕಡಿಮೆ ವೇತನದಿಂದ ಕುಟುಂಬ ನಿರ್ವಹಣೆ ಸಾಧ್ಯವೆ ಎಂದು ಸಿಎಂ ಮತ್ತು ಸಾರಿಗೆ ಸಚಿವರಿಗೆ ಗೊತ್ತಿಲ್ಲದ ವಿಷಯವೇನಲ್ಲ ಆದರೂ ಇವರದು ಮೊಂಡುತನದ ವರ್ತನೆ.
ವಿಧಿ ಇಲ್ಲದೆ ಅನಿವಾರ್ಯವಾಗಿ ನಾವು ಕರ್ತವ್ಯ ನಿರ್ವಹಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ. ಕಣ್ಣೀರಲ್ಲಿ ಸಂಸ್ಥೆಯ ನೌಕರರು ಕೈ ತೊಳೆದುಕೊಳ್ಳುವುದನ್ನು ನೋಡಿಯಾದರೂ ಸರ್ಕಾರ ನಮಗೆ ಸರಿ ಸಮಾನ ವೇತನ ಕೊಡುವ ಮೂಲಕ ನಾವು ಜನಸೇವಕರು ಎಂಬುದನ್ನು ಪರಿಗಣಿಸಿ, ವೇತನ ಆಯೋಗ ಮಾದರಿಯಲ್ಲಿ ನಮಗೂ ವೇತನ ಕೊಡಿ ಎಂದು ನೊಂದ ಸಾರಿಗೆ ನೌಕರರು ಮನವಿ ಮಾಡಿದ್ದಾರೆ.
ಸರ್ಕಾರ ಮತ್ತು ಸಾರಿಗೆ ಆಡಳಿತ ಮಂಡಳಿಯ ನಡೆಯಿಂದ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ. ನೌಕರರ ಪರ ಎಂದು ಹೇಳಿಕೊಳ್ಳುವ ಕೆಲ ಸಂಘಟನೆಗಳ ಮುಖಂಡರು ವೇತನ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಶೇ.99ರಷ್ಟು ನೌಕರರು ನಮಗೆ ವೇತನ ಪರಿಷ್ಕರ ಬೇಡ, ವೇತನ ಆಯೋಗದ ಮಾದರಿಯಲ್ಲಿ ವೇತನ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ.
ಇದರಿಂದ ಅತ್ತ ಪರಿಷ್ಕರಣೆಯನ್ನೂ ಮಾಡದೆ ಇತ್ತ ವೇತನ ಆಯೋಗ ಮಾದರಿಯಲ್ಲಿ ವೇತನ ನೀಡುತ್ತೇವೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸದಿರುವುದರಿಂದ ಈಗ ನೌಕರರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಆದರೂ ಕೂಡ ವೇತನ ಪರಿಷ್ಕರಿಸದೆ ತಮಗೆ ಆಯೋಗ ಮಾದರಿಯಲ್ಲೇ ವೇತನ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇದಕ್ಕೆ ತಾಜಾ ನಿದರ್ಶನ ಎಂಬಂತೆ ಇತ್ತೀಚೆಗೆ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನು ನೌಕರರು ಬೆಂಬಲಿಸದಿರುವುದು. ಇದರಿಂದ ಸ್ಪಷ್ಟವಾಗಿ ನಮಗೆ ಪರಿಷ್ಕರಣೆ ಬೇಡವೇ ಬೇಡ ವೇತನ ಆಯೋಗ ಮಾದರಿಯಲ್ಲೇ ವೇತನ ಕೊಡಿ ಎಂಬುದನ್ನು ಸಾರಿ ಹೇಳಿದಂತಿದೆ. ಇದನ್ನು ಅರ್ಥ ಮಾಡಿಕೊಂಡು ಸರ್ಕಾರ ನೌಕರರ ಬೇಡಿಕೆಗಳನ್ನು ಈಡೇರಿಸುವತ್ತ ಗಮನ ಹರಿಸಬೇಕಿದೆ.