ಕರ್ನಾಟಕ ರಾಜ್ಯ ಬಜೆಟ್ 2023-24: ಶಾಲಾ ಕಾಲೇಜುಗಳ ಮಕ್ಕಳ ಬಸ್ಸು ಸಮಸ್ಯೆ ನಿವಾರಣೆಗೆ ಕ್ರಮ. ಮಕ್ಕಳ ಬಸ್ಸು ಯೋಜನೆ ಪ್ರಾರಂಭಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದು, ಅದಕ್ಕಾಗಿ 100 ಕೋಟಿ ವೆಚ್ಚದಲ್ಲಿ 1000 ಹೊಸ ಕಾರ್ಯಾಚರಣೆ ಮಾಡಲಾಗುವುದು. ಇದರಿಂದ ಹೆಚ್ಚುವರಿಯಾಗಿ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.
ಇಂದು ಮಂಡಿಸಿದ ಬಜೆಟ್‌ನಲ್ಲಿ ಈ ಘೋಷಣೆ ಮಾಡಿದರು. ಇನ್ನು ಗೋ ಸಂಪತ್ತಿನ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಗೋಶಾಲೆಗಳ ಸ್ಥಾಪನೆ, ಪುಣ್ಯಕೋಟಿ ದತ್ತು ಯೋಜನೆಯ ಅನುಷ್ಠಾನ ಹಾಗೂ 290 ಸಂಚಾರಿ ಪಶುಚಿಕಿತ್ಸಾಲಯಗಳ ಪ್ರಾರಂಭ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಚರ್ಮಗಂಟು ರೋಗವನ್ನು ತಡೆಗಟ್ಟಲು 1 ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಈ ಸೋಂಕಿನಿಂದ ಮರಣ ಹೊಂದಿದ ರಾಸುಗಳ ಮಾಲೀಕರಿಗೆ 55 ಕೋಟಿ ರೂ. ಪರಿಹಾರ ಮಂಜೂರು ಮಾಡಲಾಗಿದೆ.
ರಾಜ್ಯದ 9 ಲಕ್ಷ ಹಾಲು ಉತ್ಪಾದಕರಿಗೆ 1,067 ಕೋಟಿ ರೂ. ಪ್ರೋತ್ಸಾಹಧನವನ್ನು ನೇರ ನಗದು ಪಾವತಿ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.
100 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪನೆ: ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ ಸರ್ಕಾರದಿಂದ 90 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು, ಬಳ್ಳಾರಿ ಜಿಲ್ಲೆಯಲ್ಲಿ ದಿನಂಪ್ರತಿ 2 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾ ಡೈರಿಯನ್ನು 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20,000 ಫಲಾನುಭವಿಗಳಿಗೆ 355 ಕೋಟಿ ರೂ.ಗಳ ವೆಚ್ಚದಲ್ಲಿ ಕುರಿ ಮತ್ತು ಮೇಕೆ ಘಟಕಗಳನ್ನು ಸ್ಥಾಪಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ.
ರೈತ ಮಹಿಳೆಯರಲ್ಲಿ ಕೋಳಿ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು 2022-23ನೇ ಸಾಲಿನಲ್ಲಿ 16,642 ಫಲಾನುಭವಿಗಳಿಗೆ 3.33 ಲಕ್ಷ ಕೋಳಿಮರಿಗಳನ್ನು ವಿತರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಈ ಸಾಲಿನಲ್ಲಿ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು.
ಪ್ರಾಣಿಗಳ ಮೇಲಿನ ಹಿಂಸೆ ತಡೆಯಲು ಪ್ರಾಣಿ ಕಲ್ಯಾಣ ಮಂಡಳಿಗೆ 5 ಕೋಟಿ ರೂ. ಅನುದಾನ ನೀಡಲಾಗುವುದು. ಮಂಡಳಿಯ ವತಿಯಿಂದ ಬೆಂಗಳೂರಿನಲ್ಲಿ ನಿರ್ಲಕ್ಷಿತ ಪ್ರಾಣಿಗಳ ಸೂಕ್ತ ಚಿಕಿತ್ಸೆಗಾಗಿ ಚಿಕಿತ್ಸಾಲಯಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು.
ರಾಷ್ಟ್ರೀಯ ಪ್ರಾಣಿ ತಳಿ ಸಂಪನ್ಮೂಲ ಬ್ಯೂರೋದಿಂದ ಭಾರತೀಯ ದೇಶಿ ಶ್ವಾನ ತಳಿ ಎಂದು ಮಾನ್ಯತೆ ಪಡೆದ ಮುಧೋಳ ಹೌಂಡ್ ಶ್ವಾನ ತಳಿಯ ಅಭಿವೃದ್ಧಿಗಾಗಿ 5 ಕೋಟಿ ರೂ. ಅನುದಾನ ನೀಡಲಾಗುವುದು.
ಬೀದಿನಾಯಿಗಳ ಮತ್ತು ಪೋಷಣೆಗಾಗಿ ಸಾರ್ವಜನಿಕರು ದತ್ತು ತೆಗೆದುಕೊಳ್ಳಲು ಒಂದು ಆನ್-ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು. ಇದರಿಂದ ಆಸಕ್ತ ಶ್ವಾನ ಪ್ರೇಮಿಗಳು ನೋಂದಾಯಿಸಿಕೊಂಡು ದತ್ತು ಪಡೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ.
ಮೀನು ಉತ್ಪಾದನೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ: 2022-23ನೇ ಸಾಲಿನಲ್ಲಿ ನಮ್ಮ ಕರ್ನಾಟಕ ರಾಜ್ಯವನ್ನು ಅತ್ಯುತ್ತಮ ಕರಾವಳಿ ರಾಜ್ಯವೆಂದು ಗುರುತಿಸಿ ಕೇಂದ್ರ ಸರ್ಕಾರವು ಘೋಷಿಸಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ. ಕಳೆದ ಸಾಲಿನಲ್ಲಿ 10.73 ಲಕ್ಷ ಮೆಟ್ರಿಕ್‌ಟನ್‌ಮೀನು ಉತ್ಪಾದನೆಯನ್ನು ಮಾಡಿ ದೇಶದಲ್ಲಿ ರಾಜ್ಯವು 3ನೇ ಸ್ಥಾನದಲ್ಲಿದೆ.
ಮೀನುಗಾರರಿಗೆ ನೆರವಾಗಲು 62 FFPO ಗಳ ಸ್ಥಾಪನೆ ಹಾಗೂ 12,175 ಮೀನುಗಾರರಿಗೆ ಕಿಸಾನ್‌ಕ್ರೆಡಿಟ್ ಕಾರ್ಡ್ ವಿತರಣೆಗೆ ಕ್ರಮ ವಹಿಸಲಾಗಿದೆ.
ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯವನ್ನು ಉತ್ತಮ ಪಡಿಸಲು ಕರಾವಳಿ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಕೃತಕ ಬಂಡೆ ಸಾಲುಗಳನ್ನು (Artificial Reef) ಸ್ಥಾಪಿಸಲಾಗುವುದು.
ಉತ್ತಮ ತಳಿಯ ಬಲಿತ ಬಿತ್ತನೆ ಮೀನು ಮರಿಗಳ ದಾಸ್ತಾನು (Ranching) ಪ್ರೋತ್ಸಾಹಿಸಲು 20 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.
ಉತ್ತರ ಕರ್ನಾಟಕ ಭಾಗದಲ್ಲಿ ಮೀನು ಕೃಷಿಯನ್ನು ಉತ್ತೇಜಿಸಲು ಹಾವೇರಿ ಜಿಲ್ಲೆಯಲ್ಲಿ ಹೊಸದಾಗಿ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರವನ್ನು ಸ್ಥಾಪಿಸಲಾಗುವುದು.
ಸಾರ್ವಜನಿಕರಿಗೆ ಗುಣಮಟ್ಟದ ಮೀನು ಉತ್ಪನ್ನಗಳನ್ನು ಪೂರೈಸಲು ಪರಿಸರಸ್ನೇಹಿ ತ್ರಿಚಕ್ರ ಮೀನು ಮಾರಾಟ ವಾಹನಗಳನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಒದಗಿಸಲಾಗುವುದು.