ಬೆಂಗಳೂರು: ಕಳೆದ ಮೂರು ದಿನಗಳಿಂದ ಭಾರಿ ಸುದ್ದಿಯಾಗುತ್ತಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಗಳಕ್ಕೆ ಅಂತ್ಯ ಹಾಡುವ ಸಲುವಾಗಿ ಸರ್ಕಾರ ಈ ಇಬ್ಬರಿಗೂ ಸ್ಥಳ ನಿಯೋಜನೆ ಮಾಡದೆ ಎತ್ತಗಂಡಿ ಮಾಡಿದೆ.
ಈ ಇಬ್ಬರು ಮಹಿಳಾಧಿಕಾರಿಗಳ ಕಿತ್ತಾಟದಿಂದ ಸರ್ಕಾರಕ್ಕೆ ಭಾರಿ ಮುಜುಗರವಾಗುತ್ತಿತ್ತು. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಧ್ಯಪ್ರವೇಶ ಮಾಡಿರುವ ರಾಜ್ಯ ಸರ್ಕಾರ ಇಬ್ಬರನ್ನೂ ಯಾವುದೇ ಹುದ್ದೆ ನೀಡದೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇನ್ನು ಈ ಇಬ್ಬರ ಜಗಳದ ನಡುವೆ ಹೆಸರು ಕೇಳಿ ಬಂದ ಮತ್ತೊಬ್ಬ ಐಎಎಸ್ ಅಧಿಕಾರಿ ಮನೀಶ್ ಮೌದ್ಗಿಲ್ ಅವರನ್ನೂ ವರ್ಗಾವಣೆ ಮಾಡಲಾಗಿದೆ.
ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಹಾಗೂ ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಡಿ. ರೂಪಾ ಮೌದ್ಗಿಲ್ ಅವರಿಗೆ ಯಾವುದೇ ಹುದ್ದೆ ನೀಡದೆ ವರ್ಗಾವಣೆ ಮಾಡಿದ್ದು, ಸರ್ವೇ ಮತ್ತು ಭೂ ದಾಖಲೆ ಇಲಾಖೆಯ ಆಯುಕ್ತರಾಗಿದ್ದ ಮನೀಶ್ ಮೌದ್ಗಿಲ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ವರ್ಗಾವಣೆ ಮಾಡಿ ಆದೇಶಿಸಿದೆ.
ಈ ಇಬ್ಬರು ಉನ್ನತ ಮಹಿಳಾ ಅಧಿಕಾರಿಗಳು ಕಿತ್ತಾಡಿಕೊಂಡು ಸರ್ಕಾರ ಮುಜುಗರದ ಪರಿಸ್ಥಿತಿಗೆ ಸಿಲುಕಿತ್ತು. ಹೀಗಾಗಿ ಸೋಮವಾರ ಸರ್ಕಾರವು ಈ ಇಬ್ಬರಿಗೂ ಛೀಮಾರಿ ಹಾಕಿತ್ತು. ಅಲ್ಲದೆ ನೀವು ಆರೋಪ ಮತ್ತು ಪ್ರತ್ಯಾರೋಪಗಳನ್ನು ಸಾರ್ವಜನಿಕವಾಗಿ ಮಾಡಬಾರದು ಎಂದು ನಿರ್ದೇಶನ ನೀಡಿತ್ತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ವಿಧಾನಮಂಡಲದ ಅಧಿವೇಶನದ ಬಗ್ಗೆ ಕಾಳಜಿ ವಹಿಸಿದ್ದರೂ ಸಹ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿವರಣೆಯನ್ನು ಕೇಳಲು ಸೂಚನೆ ನೀಡಿದ್ದರು.