ಮೈಸೂರು: ಪ್ರಸ್ತುತ ವರ್ಷದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀ ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿ ಪ್ರಶಸ್ತಿ’ಗೆ ಖ್ಯಾತ ಸಾಹಿತಿ ಪತ್ರಕರ್ತ ಬನ್ನೂರು ಕೆ.ರಾಜು ಅವರು ಭಾಜನರಾಗಿರುವ ಹಿನ್ನೆಲೆಯಲ್ಲಿ ನಗರದ ಪ್ರತಿಷ್ಠಿತ ಕನ್ನಡ ಸಂಘಟನೆಗಳಲ್ಲೊಂದಾದ ಮೈಸೂರು ಕನ್ನಡ ವೇದಿಕೆಯ ವತಿಯಿಂದ “ಸಾಹಿತ್ಯ ರತ್ನ” ಬಿರುದು ನೀಡಿ ದಂಪತಿ ಸಮೇತ ಸನ್ಮಾನಿಸಲಾಯಿತು.
ಸಾಹಿತಿ ಬನ್ನೂರು ರಾಜು ಅವರ ಸ್ವಗೃಹದಲ್ಲಿ ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಮೈಸೂರು ಕನ್ನಡ ವೇದಿಕೆಯ ಉಪಾಧ್ಯಕ್ಷ ಹಾಗೂ ಕನ್ನಡ ಪರ ಹೋರಾಟಗಾರ ನಾಲಾ ಬೀದಿ ರವಿ ಅವರು, ಅರ್ಹ ಸಾಹಿತಿಗಳನ್ನು ಹಾಗೂ ಉತ್ತಮ ಸಾಹಿತ್ಯ ಕೃತಿಗಳನ್ನು ದತ್ತಿ ಪ್ರಶಸ್ತಿಗಳ ಮೂಲಕ ಗುರುತಿಸಿ ಗೌರವಿಸುತ್ತಿರುವ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ನಡೆ ನಿಜಕ್ಕೂ ಶ್ಲಾಘನೀಯವಾದದ್ದು ಎಂದರು.
ಇನ್ನು ವಿಶೇಷವಾಗಿ ಬರವಣಿಗೆಯನ್ನೇ ಬದುಕು ಮಾಡಿಕೊಂಡು ಲೇಖನಿಯ ಮೂಲಕ ಕನ್ನಡದ ರಥವನ್ನು ಎಳೆಯುತ್ತಿರುವ ಸಾಹಿತಿ ಬನ್ನೂರು ರಾಜು ಅವರಂತಹ ಅಕ್ಷರ ತಪಸ್ವಿಗಳ ಸಾಹಿತ್ಯ ಕೃಷಿಯನ್ನು ಪರಿಷತ್ತು ಪ್ರಾಮಾಣಿಕವಾಗಿ ಗುರುತಿಸಿ ಗೌರವಿಸುತ್ತಿರುವುದು ನಾಡು ಮೆಚ್ಚುವಂಥ ಸತ್ಕಾರ್ಯವಾಗಿದೆ ಎಂದ ಅವರು, ಈ ದಿಶೆಯಲ್ಲಿ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಶಿ ಯವರ ಕನ್ನಡ ಸಾಹಿತ್ಯ ಸೇವೆ ಹೊಸ ದಿಕ್ಕಿನತ್ತ ಸನ್ಮಾರ್ಗದಲ್ಲಿ ಸಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ ಕಾರ್ಯಕ್ರಮದ ಅದ್ಯಕ್ಷತೆವಹಿಸಿದ್ದು ಬನ್ನೂರು ರಾಜು ಅವರ ಸಾಹಿತ್ಯ ಸಾಧನೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಗುರುಬಸಪ್ಪ ,ಮದನ್, ಮಾಲಿನಿ ಪಾಲಾಕ್ಷ, ಸರಸ್ವತಿಪುರಂ ಬಾಲು, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ,ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ, ಪಿ.ಮಹಾಲಕ್ಷ್ಮಿ ರಾಜು, ಜ್ಯೋತಿಷ್ಯರತ್ನ ರಮೇಶ್ ಸ್ಥಪತಿ, ಸವಿತಾ ಸುರೇಶ್, ಬಿ.ಆರ್.ಧನುಷ್ ಇನ್ನಿತರರಿದ್ದರು.ಕೊನೆಯಲ್ಲಿ ಎಲ್ಲರಿಗೂ ಸಿಹಿ ವಿತರಿಸಲಾಯಿತು.