ರಾಜ್‌ಕೋಟ್: ಮಲಗಿದ್ದಾಗ ತನ್ನ ಹಾಸಿಗೆಯಲ್ಲಿ ಹಾವು ಸೇರಿಕೊಂಡು ನನಗೆ ಕಚ್ಚಿದೆ ಎಂದು ಸತ್ತ ಹಾವಿನೊಂದಿಗೆ ಆಸ್ಪತ್ರೆಗೆ ದೌಡಾಯಿಸಿ ಚಿಕಿತ್ಸೆ ನೀಡುವಂತೆ ವೈದ್ಯರಲ್ಲಿ ಮಹಿಳೆಯೊಬ್ಬರು ಕೇಳಿಕೊಂಡ ಘಟನೆ ಗುಜರಾತ್ನ ರಾಜ್‌ಕೋಟ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಜರುಗಿದೆ.
ಹೌದು! ಈ ವಿಚಿತ್ರ ಪ್ರಕರಣ ರಾಜ್‌ಕೋಟ್ನಲ್ಲಿ ಬೆಳಕಿಗೆ ಬಂದಿದ್ದು ಆಕೆ ಸತ್ತ ಹಾವಿನೊಂದಿಗೆ ಆಸ್ಪತ್ರೆಗೆ 108 ಆಂಬುಲೆನ್ಸ್‌ನಲ್ಲಿ ಬಂದು ವೈದ್ಯರಿಗೆ, ತಾನು ತಂದಿದ್ದ ಸತ್ತ ಹಾವು ತೋರಿಸಿ ನಿನ್ನೆ ರಾತ್ರಿ ನನಗೆ ಕಚ್ಚಿದೆ ದಯವಿಟ್ಟು ನನ್ನನ್ನು ಬದುಕಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆ ಮಹಿಳೆಯ ಮಾತನ್ನು ಕೇಳಿದ ವೈದ್ಯರಂತು ಬೆಚ್ಚಿಬಿದ್ದಿದ್ದಾರೆ.
ಘಟನೆ ವಿವರ: ಆಕೆ ದುರ್ಗಾಬೆನ್ ಚೌಹಾಣ್ ಎಂಬ ಮಹಿಳೆ. ನಿನ್ನೆ ರಾತ್ರಿ ತಮ್ಮ ಮನೆಯಲ್ಲಿ ಮಲಗಿದ್ದಾಗ ಹಾವು ಹಾಸಿಗೆಯೊಳಗೆ ನುಗ್ಗಿದೆ. ಬೆಳಗ್ಗೆ ಎದ್ದಾಗ ಹಾವು ಹಾಸಿಗೆಯೊಳಗೆ ಇರುವುದು ಆಕೆಯ ಗಮನಕ್ಕೆ ಬಂದಿದೆ.
ಇದರಿಂದ ವಿಚಲಿತರಾದ ದುರ್ಗಾಬೆನ್ ರಾತ್ರಿ ಹಾವು ತನಗೆ ಕಚ್ಚಿದೆಯೋ, ಇಲ್ಲವೋ ಎಂಬುದರ ಬಗ್ಗೆ ಸಂಪೂರ್ಣ ಅರಿವಿಲ್ಲದ ಕಾರಣ ಆಕೆ ಭಯದಿಂದಲೇ ಉಪ್ಪನ್ನು ತಿಂದಿದ್ದಾರೆ, ಆದರೆ ಸಿಹಿಯಂತೆ ರುಚಿ ನೀಡಿದೆ ಇದರಿಂದ ಅವರ ಆತಂಕ ಮತ್ತಷ್ಟು ಹೆಚ್ಚಾಗಿದೆ.
ನಂತರ ಆಕೆ ಮೆಣಸಿನಕಾಯಿ ತಿಂದಿದ್ದಾರೆ, ಮೆಣಸಿನಕಾಯಿಯೂ ಖಾರದ ಅನುಭವ ಕೊಡುವ ಬದಲಿಗೆ ಅದೂಕೂಡ ಸಿಹಿಯಾಗಿತ್ತಂತೆ. ರುಚಿಯಲ್ಲಿನ ಈ ಬದಲಾವಣೆಯನ್ನು ಕಂಡು ಮಹಿಳೆ ಮತ್ತಷ್ಟು ಗಾಬರಿಗೊಂಡಿದ್ದು, ತನಗೆ ಹಾವು ಕಚ್ಚಿದೆ, ಅದಕ್ಕೆ ಹೀಗೆಲ್ಲಾ ಆಗುತ್ತಿದೆ ಎಂದು ಭಾವಿಸಿ 108 ನಂಬರ್‌ಗೆ ಫೋನ್ ಮಾಡಿದ್ದಾಳೆ.
ಆಂಬುಲೆನ್ಸ್ ಬಂದ ಕೂಡಲೇ ಈಕೆಯೇ ಓಡಿಹೋಗಿ ಆಂಬುಲೆನ್ಸ್‌ನಲ್ಲಿ ಕುಳಿತುಕೊಂಡಿದ್ದಾರೆ. ಇದಕ್ಕೂ ಮುನ್ನ ಆಸ್ಪತ್ರೆಗೆ ಹೋಗುವಾಗ ಆ ಮಹಿಳೆ ಸತ್ತಿದ್ದ ಹಾವನ್ನು ಒಂದು ಚೀಲದಲ್ಲಿ ಹಾಕಿಕೊಂಡು ಹೋಗಿದ್ದಾರೆ. ಆಂಬುಲೆನ್ಸ್‌ನಲ್ಲಿ ಬಂದ ಮಹಿಳೆಯನ್ನು ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಆಸ್ಪತ್ರೆ ಒಳಗೆ ಹೋದ ಕೂಡಲೇ ಆ ಮಹಿಳೆ ತಾನೂ ಚೀಲದಲ್ಲಿ ತಂದಿದ್ದ ಹಾವನ್ನು ವೈದ್ಯರಿಗೆ ತೋರಿಸಿ ನೋಡಿ ನೋಡಿ ಇದೇ ಹಾವು ನನಗೆ ಕಚ್ಚಿರೋದು ಈಗ ಸತ್ತುಹೋಗಿದೆ. ದಯಮಾಡಿ ನನ್ನನ್ನು ಬಂದುಕಿಸಿ ಎಂದು ಪರಿಪರಿಯಾಗಿ ಮನವಿ ಮಾಡಿದ್ದಾರೆ.
ಇತ್ತ ಆಕೆ ತಂದಿದ್ದ ಸತ್ತ ಹಾವನ್ನು ನೋಡಿ ವೈದ್ಯರೂ ಅಚ್ಚರಿಗೊಂಡಿದ್ದು, ಕೂಡಲೇ ಆ ಮಹಿಳೆಗೆ ಎಲ್ಲ ರೀತಿಯ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಿದ್ದಾರೆ. ಹಾವು ಕಚ್ಚಿತ್ತೋ ಇಲ್ಲವೋ ಎಂಬುವುದು ಮಾತ್ರ ಅಸ್ಪಷ್ಟ ಆದರೆ, ಮಹಿಳೆ ಯಾವುದೇ ಪ್ರಾಣಾಪಾಯವಿಲ್ಲದೆ ಆರೋಗ್ಯವಾಗಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.