ಬೆಂಗಳೂರು: ಸಾರಿಗೆ ನೌಕರರ ವೇತನವನ್ನು ಶೇ.45ರಷ್ಟು ಹೆಚ್ಚಳ ಮಾಡಬೇಕು ಎಂದು ಹೈಕೋರ್ಟ್ನಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ಸಾರಿಗೆ ನೌಕರರ ಪರ ಅರ್ಜಿ ಹಾಕಿದ್ದಾರೆ.
ಕಳೆದ ಇದೇ ಮಾ.8ರಿಂದ ಸಾರಿಗೆ ನೌಕರರ ವಿವಿಧ ಸಂಘಟನೆಗಳ ಸಭೆಯನ್ನು ಸಾರಿಗೆ ಸಚಿವ ಬಿ.ಶ್ರೀರಾಮುಲು ಹಾಗೂ ಎಂಡಿಗಳ ಅಧ್ಯಕ್ಷತೆಯಲ್ಲಿ ಕರೆದು, ಆ ಸಭೆಗಳಲ್ಲಿ ಕೇವಲ ಶೇ.8-10ರಷ್ಟು ಮತ್ತು ನಿನ್ನೆ ( ಮಾ.15) ನಡೆದ ಸಭೆಯಲ್ಲಿ ಶೇ.14ರಷ್ಟು ವೇತನ ಹೆಚ್ಚಳ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅದರ ಜತೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರಿಗೆ ನೌಕರರ ವೇತನವನ್ನು ಶೇ.15ರಷ್ಟು ಹೆಚ್ಚಳ ಮಾಡಲಾಗುವುದು ಎಂದು ಹೇಳಿದ್ದಾರೆ. ಇದನ್ನು ಗಮನಿಸಿದರೆ ಇವರೆಲ್ಲ ಒಂದು ರೀತಿ ಸಾರಿಗೆ ನೌಕರರಿಗೆ ಸೂಕ್ತವಾದ ವೇತನ ಹೆಚ್ಚಳ ಮಾಡುವುದಕ್ಕೆ ಮೀನಮೇಷ ಎಣಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಈ ಹಿನ್ನೆಲೆಯಲ್ಲೇ ವಕೀಲ ಶಿವರಾಜು ಅವರು ಸಾರಿಗೆ ನೌಕರರಿಗೆ ಶೇ.45ರಷ್ಟು ವೇತನ ಹೆಚ್ಚಳ ಮಾಡಬೇಕು. ಅದಕ್ಕೂ ಮೊದಲು ಮೂಲ ವೇತನಕ್ಕೆ ಬಿಡಿಎ ಮರ್ಜ್ ಮಾಡಬೇಕು ಆ ಬಳಿಕ ಶೇ.45ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಸಾರಿಗೆ ನಿಗಮಗಳ ಎಂಡಿಗಳಿಗೆ ಮತ್ತು ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಇದೇ ಮಾ.21ರವರೆಗೂ ಹೈ ಕೋರ್ಟ್ ಅವಕಾಶ ನೀಡಿದೆ.
ಇನ್ನು ಮಾ.21ರಂದು ಹೈ ಕೋರ್ಟ್ನಲ್ಲಿ ಈ ಸಂಬಂಧ ಸರ್ಕಾರ ಮತ್ತು ಎಂಡಿಗಳು ಏನು ಆಕ್ಷೇಪಣೆ ಸಲ್ಲಿಸುತ್ತಾರೆ ಎಂಬುದನ್ನು ನೋಡಿಕೊಂಡು ಮುಂದಿನ ಸ್ಟೆಪ್ ತೆಗೆದುಕೊಳ್ಳಲಾಗುವುದು ಎಂದು ವಕೀಲರು ತಿಳಿಸಿದ್ದಾರೆ.
ಇದೇ ಮಾ.21ರಿಂದ ಸಾರಿಗೆ ನೌಕರರ ಸಂಘ ಕರೆ ನೀಡಿರುವ ಮುಷ್ಕರದಲ್ಲಿ ನೀವು ಭಾಗವಹಿಸುತ್ತೀರಾ ಎಂದು ಕೇಳಿದ್ದಕ್ಕೆ ನಾವು ಏನಿದ್ದರು ಕಾನೂನಿನ ಹೋರಾಟ ಮಾಡುತ್ತೇವೆ ಎಂದು ವಿಜಯಪಥಕ್ಕೆ ಪ್ರತಿಕ್ರಿಯೆ ನೀಡಿದರು.
ಈ ನಡುವೆ ಸಾರಿಗೆ ನೌಕರರಿಗೆ ಸರ್ಕಾರ ಕೇವಲ ಶೇ.15ರಷ್ಟು ವೇತನ ಹೆಚ್ಚಳ ಮಾಡಿದರೆ, ಉದಾ: 15 ಸಾವಿರ ರೂ. ಮೂಲ ವೇತನ ಪಡೆಯುವ ನೌಕರರಿಗೆ ಕೇವಲ 1500 ರೂ.ಗಳು ಮಾತ್ರ ಹೆಚ್ಚಳವಾಗುತ್ತದೆ. ಆದರೆ, ಬಸ್ನ ಕಿಟಕಿಯ ಗಾಜುಗಳು ಏರ್ಕ್ರಾಕ್ ಆದರೆ ಅಥವಾ ಬಿಸಿಲಿನ ಪ್ರಖರತೆಗೆ ಒಡೆದು ಹೋದರೆ ಅದರ ದಂಡವನ್ನು ಚಾಲಕರು ಭರಿಸಬೇಕು.
ಅಂದರೆ ಇವರು ಕೊಡುವ 1500 ರೂಪಾಯಿಗೆ 2000 ರೂಪಾಯಿ ದಂಡ ಹಾಕುತ್ತಾರೆ. ಅದೇ ಒಬ್ಬ ಅಧಿಕಾರಿ 1ಲಕ್ಷ ರೂ. ಅಥವಾ 1.5 ಲಕ್ಷ ರೂ. ವೇತನ ಪಡೆಯುವವರಿಗೆ 10 ಸಾವಿರದಿಂದ 15ಸಾವಿರ ರೂ.ಗಳ ವರೆಗೆ ವೇತನ ಹೆಚ್ಚಳವಾಗುತ್ತದೆ. ಅದರ ಜತೆಗೆ ಅವರಿಗೆ ಯಾವುದೇ ಮೆಮೋ ಅಥವಾ ದಂಡ ಇರುವುದಿಲ್ಲ. ಆದರೆ ಬಡಪಾಯಿ ನೌಕರರು ಮೆಮೋ, ದಂಡದ ಜತೆಗೆ ಅಮಾನತಿನ ಶಿಕ್ಷೆಯನ್ನು ತಾವು ಮಾಡದ ತಪ್ಪಿಗೆ ಅನುಭವಿಸಬೇಕು. ಇದು ಆಗಬಾರದು ಎಂಬ ಉದ್ದೇಶದಿಂದ ನಾವು ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಇನ್ನು ನಾವು ಮೂಲ ವೇತನಕ್ಕೆ ಬಿಡಿಎ ಮರ್ಜ್ ಮಾಡಿ ಶೇ.45ರಷ್ಟು ವೇತನ ಹೆಚ್ಚಳ ಮಾಡಬೇಕು, ಅದರ ಜತೆಗೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಮಾಡುವ ಮೂಲಕ ಭವಿಷ್ಯದಲ್ಲಿ ಸಾರಿಗೆ ನೌಕರರು ವೇತನಕ್ಕಾಗಿ ಹೋರಾಟಕ್ಕೆ ಇಳಿಯ ಬಾರದು ಎಂಬ ದೃಷ್ಟಿಯಿಂದ ಈ ಪ್ರಯತ್ನ ಮಾಡುತ್ತಿದ್ದೇವೆ ಎಂದು ವಕೀಲ ಶಿವರಾಜು ವಿಜಯಪಥಕ್ಕೆ ತಿಳಿಸಿದರು.