ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳೊಂದಿಗೆ ಇಂದು ಮಧ್ಯಾಹ್ನ 12.30ರಿಂದ 3 ಗಂಟೆಯವರೆಗೂ ಸಂಸ್ಥೆ ಎಂಡಿ ಗೌಪ್ಯ ಸಭೆ ನಡೆಸಿದ್ದಾರೆ.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಈ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳನ್ನು ಶಾಂತಿನಗರದಲ್ಲಿರುವ ತಮ್ಮ ಕೇಂದ್ರ ಕಚೇರಿಗೆ ಕರೆಸಿಕೊಂಡು ಸುಮಾರು ಮೂರು ಗಂಟೆಗಳ ಕಾಲ ಗೌಪ್ಯ ಸಭೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.
ಸಭೆ ಬಳಿಕ ಇಂದು ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಸಾರಿಗೆ ನೌಕರರ ವೇತನ ಸಂಬಂಧ ಅಂತಿಮ ಆದೇಶ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.
ಆದರೆ, ಮೂರು ಗಂಟೆಗಳು ನಡೆದ ಸಭೆಯಲ್ಲಿ ಯಾವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದನ್ನು ಇನ್ನೂ ಗೌಪ್ಯವಾಗಿಡಲಾಗಿದ್ದು, ವಿಧಾನಸೌಧದಲ್ಲೇ ಅದನ್ನು ಬಹಿರಂಗ ಪಡಿಸಬಹುದು ಎಂದು ಹೇಳಲಾಗುತ್ತಿದೆ.
ಇನ್ನು ಇಂದು ಸಂಜೆ ವಿಧಾನಸೌಧದಲ್ಲೇ ಅದೂ ಮುಖ್ಯಮಂತ್ರಿಯವರಿಂದಲೇ ಶೇ….. ರಷ್ಟು ವೇತನ ಹೆಚ್ಚಳ ಮಾಡುವುದಕ್ಕೆ ನಾವು ಒಪ್ಪಿದ್ದು ಅದನ್ನು ಜಂಟಿ ಕ್ರಿಯಾ ಸಮಿತಿಯವರು ಸಮ್ಮತಿಸಿದ್ದಾರೆ ಎಂದು ಹೇಳಿಸುವ ತಂತ್ರವನ್ನು ಹೆಣೆಯಲಾಗಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ಇಂದು ಸಂಜೆ ವೇಳೆಗೆ ಸಾರಿಗೆ ನೌಕರರಿಗೆ ಶೇ. ಎಷ್ಟರಷ್ಟು ವೇತನ ಹೆಚ್ಚಳ ವಾಗಿದೆ ಎಂಬುವುದು ಬಹುತೇಕ ಖಚಿತವಾಗಲಿದೆ ಎಂದು ಹೇಳಲಾಗುತ್ತಿದೆ.