ಬೆಂಗಳೂರು: ಇದೇ ಮಾ.24ರಿಂದ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ವತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಬಂಧಪಟ್ಟಂತೆ ನಡೆಯುತ್ತಿರುವ ಬೆಳವಣಿಗೆಗಳನ್ನು ವಿವರಿಸಿ ಈಗಿಂದಲೇ ನಾನು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಿದ್ದೇನೆ ಎಂದು ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.
ಅಲ್ಲದೆ ಸಾರಿಗೆ ನಿಗಮದ ಬೆಂಗಳೂರಿನ ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಯ ಬಳಿ ಉಪವಾಸ ಸತ್ಯಾಗ್ರಹ ಆರಂಭಿದ್ದಾರೆ. ಇದಕ್ಕೂ ಮುನ್ನ ಇಂದು ನಿಗಮದ ಎಸ್‌ಅಂಡ್‌ವಿ ಅವರ ಜತೆ ನಡೆದ ಸಭೆಯಲ್ಲಿ ನೌಕರರ ಬೇಡಿಕೆ ಈಡೇರಿಸುತ್ತೇವೆ ಎಂದು ಹೇಳುವ ಬದಲಿಗೆ ಮುಷ್ಕರ ನಡೆಸಿದರೆ ಸರ್ಕಾರ ನಿಮ್ಮ ವಿರುದ್ಧ ಯಾವ ರೀತಿ ಕ್ರಮ ಜರುಗಿಸುತ್ತದೆ ಎಂದು ಹೇಳುವ ಮೂಲಕ ಭಯಹುಟ್ಟಿಸುತ್ತಿದ್ದಾರೆ ಎಂದು ಚಂದ್ರು ತಿಳಿಸಿದ್ದಾರೆ.
ಸರ್ಕಾರವೇ ಕಳೆದ 2 ವರ್ಷದ ಹಿಂದೆ ಲಿಖಿತವಾಗಿ ಕೊಟ್ಟಿರುವ ಭರವಸೆ ಈಡೇರಿಸಬೇಕು ಎಂದು ಅಂದಿನಿಂದಲೂ ಮನವಿ ಮಾಡುತ್ತ ಬಂದರೂ ಯಾವುದೇ ಪ್ರತಿಫಲ ಸಿಕ್ಕಿಲ್ಲ. ಹೀಗಾಗಿ ಇದೇ.24ರಿಂದ ಮುಷ್ಕರ ನಡೆಸಲು ಸಿದ್ಧರಾಗಿದ್ದೇವೆ. ಆದರೆ, ಸರ್ಕಾರ ಅಧಿಕಾರಿಗಳ ಮೂಲಕ ಈಗಾಗಲೇ ನಮಗೆ ಬೆದರಿಕೆ ಹಾಕಿಸುತ್ತಿದೆ ಎಂದು ಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರಿಂದ ಮನನೊಂದ ನಾನು ಮಾ.24ರಿಂದ ಇರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೂ ಮುನ್ನ ಅಂದರೆ ಇಂದಿನಿಂದಲೇ (ಮಾ.21) ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇನೆ ಎಂದು ತಿಳಿಸಿದ್ದು, ಇನ್ನು ಮಾ.24ರ ಮುಷ್ಕರವನ್ನು ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದರ ನಡುವೆ ಉಪವಾಸ ಸತ್ಯಾಗ್ರಹ ಕುಳಿತಿದ್ದ ಚಂದ್ರು ಅವರನ್ನು ರಾತ್ರಿ 8.30ರ ಸುಮಾರಿಗೆ ಮತ್ತೊಮ್ಮೆ ಈ ಸಂಬಂಧ ಚರ್ಚಿಸೋಣವೆಂದು ಅಧಿಕಾರಿಗಳು ಈಗ ಮತ್ತೊಮ್ಮೆ ಸಭೆ ನಡೆಸುತ್ತಿದ್ದಾರೆ.
ಈ ಸಭೆಯಲ್ಲಿ ಅಧಿಕಾರಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಎಂಬುವುದನ್ನು ಇನ್ನಷ್ಟೇ ತಿಳಿಯಬೇಕಿದೆ.