ಮೈಸೂರು: ರಾಜ್ಯ ಸರ್ಕಾರ ಮೀಸಲಾತಿ ಘೋಷಣೆಗೆ ಮುನ್ನ ವೈಜ್ಞಾನಿಕವಾಗಿ ಅಧ್ಯಯನ ಮಾಡಿದೆಯೇ? ಯಾವ ಆಧಾರದಲ್ಲಿ ಮೀಸಲಾತಿ ಘೋಷಣೆ ಮಾಡಿದೆ? ಯಾರ ಸಲಹೆ ಪಡೆದು ಮೀಸಲಾತಿ ಘೋಷಣೆ ಮಾಡಿದ್ದಾರೆ ಎಂದು ಮೀಸಲಾತಿ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಜೆಡಿಎಸ್ ಪಂಚರತ್ನ ಯಾತ್ರೆ ಸಮಾರೋಪ ಯಶಸ್ವಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೀಸಲಾತಿ ಘೋಷಣೆ ಮಕ್ಕಳ ಆಟಿಕೆಯಂತೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದ ಸಾಧನೆ ಬಣ್ಣ ಬಣ್ಣದ ಜಾಹೀರಾತಿಗೆ ಸೀಮಿತವಾಗಿದೆ. ಉತ್ತರ ಕರ್ನಾಟಕ ಸಿಎಂ ಕ್ಷೇತ್ರದ ಬಡತನದ ಬಗ್ಗೆ ಕೇಂದ್ರ ವರದಿ ಮಾಡಿದೆ. ಅಪೌಷ್ಟಿಕತೆಯ ಬಗ್ಗೆಯೂ ಕೇಂದ್ರ ಸರ್ಕಾರ ವರದಿ ನೀಡಿದೆ. ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಹೇಳುತ್ತಾರೆ. ಬಡತನ ಅಪೌಷ್ಟಿಕತೆ ನಿವಾರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಆದರೆ ಕೇಂದ್ರ ಸರ್ಕಾರ ಏನು ಮಾಡುತ್ತಿದೆ? ರಾಜ್ಯಕ್ಕೆ ಬಂದು ಈ ಬಗ್ಗೆ ಕ್ರಮ ವಹಿಸಲು ಮುಂದಾಗಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದರು.
ಮೋದಿ ಸಮಾಧಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ನಿಮ್ಮನ್ನು ಸಮಾಧಿ ಮಾಡಲು ಯಾರಿಗೆ ಆಗುತ್ತದೆ. ಅಂಬೇಡ್ಕರ್ ಅವರ ಸಂವಿಧಾನ ಸಮಾಧಿ ಮಾಡಲು ಹೊರಟಿರುವುದು ನೀವು. ಒಬ್ಬ ಪ್ರಧಾನಿ ಬಾಯಿಂದ ಈ ರೀತಿಯ ಮಾತು ಎಷ್ಟರಮಟ್ಟಿಗೆ ಸರಿ. ಕನ್ನಡಿಗರು ಜೀವ ಉಳಿಸಿ ಅಂತಿದ್ದಾರೆ. ಮಹರಾಷ್ಟ್ರದವರು ದಬ್ಬಾಳಿಕೆ ಮಾಡಿದರು. ಕನಿಷ್ಠ ಸೌಜನ್ಯಕ್ಕೂ ನಮ್ಮ ಪರ ವಹಿಸಲಿಲ್ಲ. ನಿಮಗೆ ಕನ್ನಡಿಗರ ಮತ ಬೇಕು ಕನ್ನಡಿಗರಿಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.
ರಾಮನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಸಿಎಂ ಚಾಲನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಜೆಪಿಯವರು ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದ್ಯಾವುದು ಹೆಚ್ಚು ದಿನ ನಡೆಯುವುದಿಲ್ಲ. ಉತ್ತರಪ್ರದೇಶದ ರೀತಿ ಕರ್ನಾಟಕವನ್ನು ಮಾಡಲು ಸಾಧ್ಯವಿಲ್ಲ ಎಂದ ರು.
ಇನ್ನು ಕಾರ್ಯಕ್ರಮಗಳಿಗೆ ಜನರನ್ನು ಕರೆತರಲು ಅಧಿಕಾರಿಗಳಿಗೇ ತಾಕೀತು ಮಾಡಿದ್ದಾರೆ. ಸರ್ಕಾರದ ಕಾರ್ಯಕ್ರಮದಲ್ಲಿ ಕೇಸರಿ ಬಾವುಟ ಏಕೆ? 3 ವರ್ಷ ಸುಮ್ಮನಿದ್ದ ಸರ್ಕಾರ ಈಗ ಏಕೆ ಶಂಕುಸ್ಥಾಪನೆ ಮಾಡ್ತಿದೆ. ಯಾವ ಪುರುಷಾರ್ಥಕ್ಕೆ ಶಂಕುಸ್ಥಾಪನೆ ಮಾಡುತ್ತಿದೆ ಎಂದು ಪ್ರಶ್ನಿಸುವ ಮೂಲಕ ಶಂಕುಸ್ಥಾಪನೆ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದರು.
ಚಾಮುಂಡಿ ನಾಡಿನಲ್ಲಿ ಆಯೋಜಿಸಿದ್ದ ಸಮಾವೇಶಕ್ಕೆ ಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಏಪ್ರಿಲ್ 10ರವೆಗೂ ಪಂಚರತ್ನ ಯಾತ್ರೆ ಮುಂದುವರೆಯಲಿದೆ ಎಂದು ತಿಳಿಸಿದರು.
ನಾಳೆಯಿಂದ ಬೆಂಗಳೂರು ನಗರದ ಕ್ಷೇತ್ರದಲ್ಲಿ ನಡೆಯಲಿದ್ದು, ಏ.6ರಂದು ಮೈಸೂರಿನ ಪಿರಿಯಾಪಟ್ಟಣ, 7 ರಂದು ಕೆ.ಆರ್. ನಗರ ನಂತರ ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ಕ್ಷೇತ್ರದಲ್ಲಿ ರಥಯಾತ್ರೆ ನಡೆಸುತ್ತೇವೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ ಮತ್ತಿತರರು ಉಪಸ್ಥಿತರಿದ್ದರು.