ಬಳ್ಳಾರಿ: ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಾರಾ ಪ್ರತಾಪ್ ರೆಡ್ಡಿಯವರಿಗೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಘೋಷಿಸಿದರು.
ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1985ರಲ್ಲಿ ನಾನು ಮತ್ತು ಪ್ರತಾಪ್ ಜನತಾ ಪಾರ್ಟಿಯಲ್ಲಿ ಇದ್ದೆವು. ಇಬ್ಬರು ಬೇರೆ ಬೇರೆ ದಾರಿಯಲ್ಲಿ ನಡೆದರು ಚಿಂತನೆ ಒಂದೇ ಆಗಿದೆ. ಪಾರದರ್ಶಕ ಆಡಳಿತ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆ, ಶೋಷಿತರ ಧ್ವನಿಯಾಗಬೇಕು, ಒಳ್ಳೇ ಕೆಲಸ ಮಾಡಬೇಕು ಎನ್ನವ ಚಿಂತನೆಯನ್ನು ಪ್ರತಾಪ್ ರೆಡ್ಡಿ ಹೊಂದಿದ್ದಾರೆ ಎಂದರು.
ಪಾರದರ್ಶಕ, ಪ್ರಾಮಾಣಿಕ ವ್ಯಕ್ತಿಗಳಿಗೆ ಬೆಂಬಲ ಕೊಡಲು ನಿರ್ಧರಿಸಿದಾಗ ಪ್ರತಾಪ್ ರೆಡ್ಡಿ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ. ಪ್ರತಾಪ್ ರೆಡ್ಡಿ ಹೋರಾಟದ ಹಿನ್ನೆಲೆಯಿಂದ ಬಂದವರು. ನೀರಿಗಾಗಿ, ಮೂಲ ಸೌಕರ್ಯಗಳಿಗಾಗಿ ಹೋರಾಡಿ ಜನರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಜೊತೆ ಆಮ್ ಆದ್ಮಿ ಪಕ್ಷ ಕೈ ಜೋಡಿಸಲಿದೆ. ಏಳು ಜಿಲ್ಲೆಯ ಜಿಲ್ಲಾಧ್ಯಕ್ಷರಿಗೆ ಬೆಂಬಲ ನೀಡಲು ಮನವಿ ಮಾಡಿದ್ದೇವೆ. ಕೇಂದ್ರದ ನಾಯಕರಿಗೆ ಕೂಡ ವಿಚಾರ ತಿಳಿಸಿದ್ದು, ಅವರು ಬೆಂಬಲ ನೀಡಲು ಒಪ್ಪಿದ್ದಾರೆ ಎಂದು ಹೇಳಿದರು.
ನಗರಸಭೆ, ಪುರಸಭೆ, ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದಾಗಿ ತೆರವಾಗಿರುವ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗಳಲ್ಲಿ ನಾವು ಸ್ಪರ್ಧಿಸಲಿದ್ದೇವೆ. ನಂಜನಗೂಡು ಪುರಸಭೆಯಲ್ಲಿ ಒಂದು ಕ್ಷೇತ್ರಕ್ಕೆ, ಶಿರಾ ನಗರಸಭೆಯಲ್ಲಿ ಒಂದು ಕ್ಷೇತ್ರ, ಮುದ್ದೇಬಿಹಾಳದಲ್ಲಿ ಒಂದು ಕ್ಷೇತ್ರ, ಮಂಗಳೂರಿನಲ್ಲಿ ಒಂದು ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ನಾರಾ ಪ್ರತಾಪ್ ರೆಡ್ಡಿ, ಬೆಂಬಲ ನೀಡಿದ್ದಕ್ಕೆ ಆಮ್ ಆದ್ಮಿ ಪಕ್ಷಕ್ಕೆ ಧನ್ಯವಾದಗಳನ್ನು ತಿಳಿಸಿದರು. ಕಾಂಗ್ರೆಸ್ ಟಿಕೆಟ್ ಕೊಟ್ಟರೂ, ಕೊಡದಿದ್ದರೂ ಚುನಾವಣೆಗೆ ನಿಲ್ಲಲು ನಿರ್ಧರಿಸಲಾಗಿತ್ತು. ಪಕ್ಷೇತರವಾಗಿ ನಿಂತರೂ ಎಲ್ಲಾ ಕಡೆಯಿಂದ ಉತ್ತಮ ಬೆಂಬಲ ಸಿಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಬಳ್ಳಾರಿ ಜಿಲ್ಲಾಧ್ಯಕ್ಷ ಮಂಜುನಾಥ, ಸ್ಥಳೀಯ ಮುಖಂಡ ಕೇಶವರೆಡ್ಡಿ ಭಾಗವಹಿಸಿದ್ದರು.