ಸಾಂಪ್ರದಾಯಿಕವಾಗಿ ಜರುಗಿದ ನಂಜುಂಡೇಶ್ವರ ಸ್ವಾಮಿ ಮಿನಿ ರಥೋತ್ಸವ
ಕೊರೊನಾ ಭೀತಿ ಹಿನ್ನೆಲೆ ಕೇವಲ ಐದು ಮಂದಿ ಭಕ್ತರು ಭಾಗಿ
ನಂಜನಗೂಡು: ಇಂದು ನಡೆಯಬೇಕಿದ್ದ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಪಂಚ ಮಹಾರಥೋತ್ಸವ ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವುದರಿಂದ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ರದ್ದಾಗಿದೆ.
ಆದರೂ ದೇವಾಲಯದ ಒಳಗೆ ಆಡಳಿತ ಮಂಡಳಿಯವರು ಸಾಂಪ್ರದಾಯಿಕವಾಗಿ ಶ್ರೀಸ್ವಾಮಿಗೆ ಪೂಜೆ ಸಲ್ಲಿಸಲು ಅನುಮತಿ ನೀಡಿದ್ದರು. ಹೀಗಾಗಿ ರಥೋತ್ಸವವನ್ನು ಸಾಂಕೇತಿಕವಾಗಿ ಶನಿವಾರ ನೆರವೇರಿಸಲಾಯಿತು.
ದೊಡ್ಡ ತೇರಿನ ಬದಲು ಪುಟಾಣಿ ತೇರಿನ ಮೂಲಕ ರಥೋತ್ಸವ ನಡೆಸಲಾಯಿತು. ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸೇರುವ ಜಾಗದಲ್ಲಿ ಕೇವಲ 5 ಜನರು ಇದ್ದರು. ಈ ಹಿನ್ನೆಲೆಯಲ್ಲಿ ಅರ್ಚಕರು, ಕೆಲವು ಸಿಬ್ಬಂದಿ ಸೇರಿ ಸರಳ ಆಚರಣೆ ಮಾಡಿದರು.
ಮುಂಜಾನೆ 5.30ಕ್ಕೆ ದೇವಸ್ಥಾನದ ಹೊರ ಭಾಗದಲ್ಲಿ ಪೂಜೆ ಸಲ್ಲಿಸಿ ರಥೋತ್ಸವ್ಕೆ ಚಾಲನೆ ನೀಡಲಾಯಿತು. ದೇವಾಲಯದ ಒಳ ಆವರಣದಲ್ಲೇ ಪುಟ್ಟ ರಥದಲ್ಲಿ ಉತ್ಸವ ಮೂರ್ತಿ ಪೂಜೆ ನಡೆಯಿತು.
ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವ ಕಾರಣಕ್ಕೆ ನಂಜನಗೂಡು ಸಂಪೂರ್ಣ ಸ್ತಬ್ಧವಾಗಿದೆ. ಹೀಗಾಗಿ ಸರ್ಕಾರದ ವತಿಯಿಂದ ನಡೆಯುತ್ತಿದ್ದ ಗೌತಮ ಪಂಚ ರಥೋತ್ಸವ ರದ್ದಾಗಿದ್ದರಿಂದ ನಂಜನಗೂಡು ಯುವ ಬ್ರಿಗೇಡ್ ಯುವಕರು ಚಿಕ್ಕ ತೇರು ನಿರ್ಮಿಸಿ ದೇವಸ್ಥಾನದ ಸುತ್ತ ಎಳೆದರು.