ಬೆಂಗಳೂರು: ಬೆಂಗಳೂರಿನಲ್ಲಿ ಸಂಭವಿಸುತ್ತಿರುವ ಕೊರೊನಾ ಮಹಾಸ್ಫೋಟಕ್ಕೆ ತತ್ತರಿಸಿರುವ ರಾಜ್ಯದ ರಾಜಧಾನಿಗೆ ಬಂದಿದ್ದ ಗ್ರಾಮೀಣ ಪ್ರದೇಶದ ಜನರು ಬಾಡಿಗೆ ಮನೆಯನ್ನು ತೊರೆದು ತಮ್ಮ ಸ್ವಂತ ಊರಿಗೆ ತೆರಳುತ್ತಿದ್ದಾರೆ.
ಇನ್ನು ಬೆಂಗಳೂರನ್ನು ಮಂಗಳವಾರ (ನಾಳೆ) ರಾತ್ರಿ 8 ಗಂಟೆಯಿಂದ 7ದಿನಗಳವರೆಗೆ ಸಂಪೂರ್ಣವಾಗಿ ಲಾಕ್‌ಡೌನ್ ಮಾಡುತ್ತಿರುವುದರಿಂದ ದುಡಿಮೆಗಾಗಿ ನಗರಕ್ಕೆ ಬಂದಿದ್ದ ಸಾವಿರಾರು ಮಂದಿ ತಮ್ಮ ಹಳ್ಳಿಗಳನ್ನು ಸೇರಿಕೊಳ್ಳುತ್ತಿದ್ದಾರೆ.
ಇಂದು ತಮ್ಮ ತಮ್ಮ ಗ್ರಾಮಗಳಿಗೆ ತೆರಳುತ್ತಿರುವುದರಿಂದ ಮೈಸೂರು ಮತ್ತು ನೆಲಮಂಗಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಂ ಉಂಟಾಗಿದೆ.
ಇನ್ನು ಬೆಂಗಳೂರನ್ನು ತೊರೆಯುತ್ತಿರುವ ಜನರನ್ನು ಕೇಳಿದರೆ ನಾವು ಕೆಲಸವಿಲ್ಲದಿದ್ದರು ಈವರೆಗೂ ಹೇಗೊ ಮನೆ ಬಾಡಿಗೆ ಮತ್ತು ಊಟದ ವ್ಯವಸ್ಥೆ ಮಾಡಿಕೊಂಡಿದ್ದೆವು. ಕಾರಣ ನಗರದಲ್ಲಿ ಕೊರೊನಾ ಕಡಿಮೆಯಾಗಬಹುದು ಎಂಬ ನಂಬಿಕೆಯಿಂದ ಇದ್ದೆವು. ಆದರೆ ಅದರ ತೀವ್ರತೆ ಹೆಚ್ಚಾಗುತ್ತಿದ್ದು, ಇನ್ನು ಆರು ತಿಂಗಳಾದರೂ ಕಡಿಮೆ ಆಗುವ ಲಕ್ಷಣಗಳು ಕಾಣುತ್ತಿಲ್ಲ ಆದ್ದರಿಂದ ಕೈಯಲ್ಲಿ ಕೆಲಸವಿಲ್ಲ ಇದರಿಂದ ಮನೆ ಬಾಡಿಗೆ ಕಟ್ಟಲು ಕಷ್ಟವಾಗುತ್ತಿದೆ. ಹೀಗಾಗಿ ಹಳ್ಳಿಗೆ ತೆರಳುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.
ಹೌದು ಕೊರೊನಾ ಒಂದೆಡೆ ಬಾಧಿಸುತ್ತಿದ್ದರೆ ಇನ್ನೊಡೆದೆ ದೇಶದ ಆರ್ಥಿಕತೆ ಮಕಾಡೆ ಮಲಗಿದೆ. ಈ ನಡುವೆ ಇಂಧನ ಬೆಲೆ ಸೇರಿದಂತೆ ನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದರಿಂದ ಜನ ಜೀವನ ದುಸ್ತರವಾಗಿರುವುದರಿಂದ ಬೇರೆ ದಾರಿ ಕಾಣದೆ ದುಡಿಮೆಗೆ ಬಂದಿದ್ದ ಹಳ್ಳಿಗರು ತಮ್ಮ ಕಾಲಿಗೆ ಬುದ್ಧಿ ಹೇಳುತ್ತಿದ್ದಾರೆ.