ಮುಸ್ಲಿಮರು ದೇವಸ್ಥಾನಗಳ ಎದುರು ವ್ಯಾಪಾರ ಮಾಡುವಂತಿಲ್ಲ ಮುಸ್ಲಿಂ ಹಠಾವೋ ಧರ್ಮ ಬಚಾವೋ???
ಮಾರ್ವಾಡಿಗಳು, ಯುಪಿ ಮತ್ತು ಬಿಹಾರಿ ಬಾಬುಗಳು ವ್ಯಾಪಾರ ಮಾಡುವಂತಿಲ್ಲ ಸೇಠ ಜಿ ಹಠಾವೋ ಗಾಂವ್ ಬಚಾವೋ???
ಅರೇ ಏನ್ರಿ ಇದೆಲ್ಲ…??? ಕೆಲ ವರ್ಷಗಳ ಹಿಂದಷ್ಟೆ ಪಾಂಚ್ ರೂಪಯ್ ಕಾ ಶಕ್ಕರ್, ದೋ ರೂಪಾಯಿ ಕಾ ದಾಲ್ ಅಂತ ಹತ್ತು ರೂಪಾಯಿ ಹಿಡಿದು ಬಂದು ಅವತ್ತಿನ ಅಡುಗೆಗೆ ಆಗುವಷ್ಟು ದಿನಸಿ ಖರೀದಿಸುತ್ತಿದ್ದ ಬಡ ಕುಟುಂಬಗಳ ಕಷ್ಟದ ದಿನಗಳನ್ನು ಕಣ್ಣಾರೆ ಕಂಡವನು ನಾನು..
ಒಂದು ಕಡೆ ಸರ್ಕಾರ ಕಾರ್ಯಕ್ರಮಗಳಲ್ಲಿ ಹಾರ ತುರಾಯಿ ಬಳಕೆ ಬೇಡ ಅಂತ ಹೂವು ಮಾರುವವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದರೆ ಇನ್ನೊಂದು ಕಡೆ ದುಡಿಯುವ ವರ್ಗವನ್ನು ಜನಾಂಗೀಯ ದ್ವೇಷದ ಬಾಣಲೆಗೆ ತಳ್ಳಿ ದ್ವೇಷದ ಬೀಜ ಬಿತ್ತುವ ಹುನ್ನಾರಗಳು ನಿರಂತರವಾಗಿ ನಡೆಯುತ್ತಿವೆ.
ದೇಶದ ಪ್ರಜೆಯೊಬ್ಬ ತನ್ನ ಉದ್ದಿಮೆಯನ್ನು ಭಾರತದ ಯಾವುದೇ ಸ್ಥಳದಲ್ಲಿ ನಿರಾತಂಕವಾಗಿ ಸ್ಥಾಪಿಸಬಹುದು ಅಂತ ಭಾರತದ ಸಂವಿಧಾನದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ.
ಪರಸ್ಪರ ಸಮಾನತೆ, ಸಹಬಾಳ್ವೆ, ಸಹೋದರತ್ವದಿಂದ ಬದುಕುವ ಪಾಠವನ್ನು ಸಂವಿಧಾನದ ಆರಂಭದ ಪೀಠಿಕೆಯಲ್ಲಿ ವಿವರಿಸಲಾಗಿದೆ. ಹೀಗಿದ್ದಾಗೂ ಕೂಡ ವ್ಯಾಪಾರ ಮಾಡುತ್ತಿರುವವರು ಪರ ರಾಜ್ಯದವರು ಅನ್ನುವ ಕಾರಣಕ್ಕೋ, ಪರ ಧರ್ಮೀಯರು ಅನ್ನುವ ಕಾರಣಕ್ಕೋ ಅವರ ಹತ್ತಿರ ಖರೀದಿಸಬೇಡಿ, ಅಯ್ಯೋ ಎಷ್ಟೇ ಆದ್ರೂ ಸಾಬ್ರು ನೋಡಿ ಅನ್ನುವ ಮನಸ್ಥಿತಿ ಯಾಕೆ ಇತ್ತೀಚೆಗೆ ಬೆಳೆಯುತ್ತಿದೆ.
ಅಂದರೆ ಜಾತಿ ಮತ್ತು ಧರ್ಮದ ವಿಷ ಬೀಜ ಬಿತ್ತುವುದೇ ರಾಜಕೀಯ ಪಕ್ಷಗಳ ಪ್ರಮುಖ ಅಜೆಂಡಾ ಆಗುತ್ತಿದೆ. ಹಿಂದುತ್ವದ ಹೆಸರಿನಲ್ಲಿ, ರಾಮ ಮಂದಿರ-ಬಾಬ್ರಿ ಮಸೀದಿಯ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಹೊಸ ವಿವಾದಗಳು ಸಿಗುತ್ತಿಲ್ಲ ಅನ್ನುವ ಕಾರಣಕ್ಕಾಗಿ ಮುಗ್ಧ ಮನಸ್ಸುಗಳಲ್ಲಿ ಧರ್ಮದ ಅಫೀಮು ತುಂಬಿ ಮನುಷ್ಯತ್ವದ ಕತ್ತನ್ನೆ ಜೀರಲಾಗುತ್ತಿದೆ.
ಪ್ರತಿಪಕ್ಷಗಳು ಕೂಡ ಒಂದು ವರ್ಗವನ್ನು ಓಲೈಸಲು ಹೋಗಿ ಮತ್ತೊಂದು ವರ್ಗಕ್ಕೆ ಅನ್ಯಾಯವನ್ನೇ ಮಾಡುತ್ತಿವೆ. ಎಲ್ಲೋ ಒಂದು ಹೆಣ ಬಿದ್ದರೆ ಸತ್ತವ ಯಾವ ಧರ್ಮದವ ಅಂತ ಯೋಚಿಸುವ ಮನಸ್ಥಿತಿ ಎಲ್ಲರಲ್ಲೂ ಮೂಡುವಂತ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ.
ವ್ಯಾಪಾರ ವಹಿವಾಟು ಮಾಡುವ ವ್ಯಕ್ತಿಯ ಧರ್ಮದ ಬಗ್ಗೆ ಜಾತಿಯ ಬಗ್ಗೆ ಅಥವಾ ಅವ ಎಲ್ಲಿಂದ ಬಂದ ಅಂತ ಮಾತನಾಡುವ ವ್ಯಕ್ತಿಗಳು ತಮ್ಮ ಮನೆಯಲ್ಲಿ ಕುಳಿತು ಅಮೆಜಾನ್, ಜೋಮ್ಯಾಟೋ, ಸ್ವಿಗ್ಗಿ, ಪ್ಲಿಪ್ಕಾರ್ಟ ಅಂತಹ ಮಲ್ಟಿ ನ್ಯಾಷನಲ್ ಕಂಪನಿಗಳಿಂದ ಮನೆಯ ಬಾಗಿಲಿಗೆ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಮಹಾನುಭಾವರೇ ಹೊರತು ಅವರು ಯಾರೂ ಕೂಡ ಒಬ್ಬ ಬೀದಿ ಬದಿಯ ಕುಂಬಾರ, ಕಮ್ಮಾರ, ಚಮ್ಮಾರ ಅಥವಾ ಒಬ್ಬ ತಳ್ಳುಗಾಡಿಯ ವ್ಯಾಪಾರಿಯ ಹತ್ತಿರ ವ್ಯವಹರಿಸುವವರು ಖಂಡಿತ ಅಲ್ಲ ಅನ್ನುವದು ನೆನಪಿರಲಿ.
ಬಂಪರ್ ಆಫರ್ ಮತ್ತು ಡಿಸ್ಕೌಂಟ್ ಸೇಲ್ ಹಾಗೂ ಬೈ ಒನ್ ಗೆಟ್ ಒನ್ ಗಳ ಹಿಂದೆ ಬಿದ್ದು ಬಡ ಹಾಗೂ ಮಧ್ಯಮ ವರ್ಗದ ಜನರ ಹೊಟ್ಟೆಪಾಡಿನ ಮೇಲೆ ಕೈ ಹೊಡೆಯುವದು ಎಷ್ಟರ ಮಟ್ಟಿಗೆ ಸರಿ ಅಲ್ಲವೇ ???
ಅಂದ ಹಾಗೆ ವ್ಯಾಪಾರ ವಹಿವಾಟು ಮಾಡುವಾಗ ದೇವಸ್ಥಾನದ ಎದುರು ತೆಂಗಿನಕಾಯಿ, ಅಗರಬತ್ತಿ, ಕರ್ಪೂರ ಖರೀದಿಸುವಾಗಲೋ ಅಥವಾ ದೇವರಂತ ಮಕ್ಕಳಿಗೆ ಹಣ್ಣು ಹಂಪಲು ಖರೀದಿಸುವಾಗಲೋ ನಿಮ್ಮ ಮನಸ್ಸಿನಲ್ಲಿ ಮಾರುವವ ಯಾವ ಜಾತಿಯವ ಅನ್ನುವ ಪ್ರಶ್ನೆ ಹುಟ್ಟಿದರೆ ನಿಮ್ಮ ಭಕ್ತಿಯೂ ನಿರರ್ಥಕವೇ…
ಯಾಕೆಂದರೆ ನಮ್ಮನ್ನು ಸೃಷ್ಟಿಸಿದ ದೇವರು ಕೇವಲ ಗಂಡು ಹೆಣ್ಣುಗಳಾಗಿ ಸೃಷ್ಟಿಸಿದ್ದಾನೆ ಇನ್ನೂ ಹಾರ್ಮೋನ್ ವ್ಯತ್ಯಾಸದಿಂದ ತೃತೀಯ ಲಿಂಗಿಗಳು ಪರಿವರ್ತನೆ ಹೊಂದಿದ್ದಾರೆ ಅಷ್ಟೇ…
ಜಗತ್ತಿಗೆ ಇರುವ ಸೂರ್ಯನೊಬ್ಬ ಜಾತಿ ಧರ್ಮ ನೋಡದೆ ಬೆಳಕು ಮತ್ತು ಬಿಸಿಲು ಕೊಡುತ್ತಾನೆ, ಚಂದಿರನೊಬ್ಬ ಜಾತಿ ಧರ್ಮ ನೋಡದೆ ತಂಪನೀಯುತ್ತಾನೆ, ಬೀಸುವ ಗಾಳಿ, ಹರಿಯುವ ನೀರು ಎಂದೂ ಬಳಸುವವರ ಧರ್ಮವನ್ನು ಪ್ರಶ್ನಿಸಲೇ ಇಲ್ಲ ಅಂದಮೇಲೆ
ಈ ಧರ್ಮ, ಜಾತಿ, ಜನಾಂಗವನ್ನು ಹುಲುಮಾನವರಾದ ನಾವಷ್ಟೇ ಸೃಷ್ಟಿಸಿಕೊಂಡಿದ್ದೇವೆ ಸದ್ಯದ ಪರಿಸ್ಥಿತಿಯಲ್ಲಿ ನಾವೆಲ್ಲ ತುರ್ತಾಗಿ ಮಾತನಾಡಬೇಕಿರುವದು ಮರಗಳ ಮಾರಣ ಹೋಮದ ಬಗ್ಗೆ,ಪರಿಸರದಲ್ಲಿ ಆಗುತ್ತಿರುವ ಅಪಾರ ಪ್ರಮಾಣದ ಬದಲಾವಣೆ, ಋತುಮಾನಗಳ ವೈಪರೀತ್ಯ, ಅತಿ ಪುಟ್ಟ ವಯಸ್ಸಿನಲ್ಲಿ ಋತುಮತಿ ಆಗುತ್ತಿರುವ ಅಪ್ರಾಪ್ತ ಬಾಲಕಿಯರ ಆರೋಗ್ಯದ ಮೇಲಿನ ಗಂಭೀರ ಪರಿಣಾಮಗಳ ಬಗ್ಗೆ ಮತ್ತು ಹೆಚ್ಚುತ್ತಿರುವ ಅಸ್ತಮಾ, ಕ್ಯಾನ್ಸರ್, ಲೀವರ್ ಡ್ಯಾಮೇಜ ನಂತಹ ಮಾರಣಾಂತಿಕ ಕಾಯಿಲೆಗಳ ಬಗ್ಗೆ ಮತ್ತು ಸಮಾಜದಲ್ಲಿ ಹೆಚ್ಚುತ್ತಿರುವ ಕೊಲೆ, ಅತ್ಯಾಚಾರ, ಸುಲಿಗೆಗಳಿಗೆ ಆಗಬೇಕಾದ ಶಿಕ್ಷೆಗಳ ಬಗ್ಗೆ ಹಾಗೂ ಅಪರಾಧಗಳನ್ನು ತಡೆಯುವ ಬಗ್ಗೆಯೇ ಹೊರತು ಜಾತಿ, ಧರ್ಮ ಅಥವಾ ಮೀಸಲಾತಿಗಳ ಬಗ್ಗೆ ಅಲ್ಲ ಅನ್ನುವದು ನನ್ನ ಅಭಿಪ್ರಾಯ..
l ದೀಪಕ ಶಿಂಧೇ – 9482766018