ಮೇಕೆಗಳಿದ್ದ ಕೊಟ್ಟಿಗೆಗೆ ಚಿರತೆ ಹಿಂಡು ದಾಳಿ : 6ಕೊಂದು, ನಾಲ್ಕನ್ನು ಹೊತ್ತೊಯ್ದಿವೆ
ಪಾಂಡವಪುರ: ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಮೇಕೆಗಳ ಮೇಲೆ ಚಿರತೆಗಳ ಹಿಂಡು ದಾಳಿ ಮಾಡಿ ಆರು ಮೇಕೆಗಳನ್ನು ಕೊಂದು ನಾಲ್ಕು ಮೇಕೆಗಳನ್ನು ಹೊತ್ತೊಯ್ದಿರಿವ ಘಟನೆ ತಾಲೂಕಿನ ಗಿರಿಯಾರಹಳ್ಳಿಯಲ್ಲಿ ಜರುಗಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿಯ ನಿವಾಸಿ ನಾಗೇಗೌಡ ಎಂಬುವರ ಕೊಟ್ಟಿಗೆಯಲ್ಲೇ ಚಿರತೆಗಳು ದಾಳಿ ಮಾಡಿ ಆರು ಕೊಂಡು ನಾಲ್ಕು ಮರಿಗಳನ್ನು ಕಚ್ಚಿಕೊಂಡು ಹೋಗಿರೋದು.
ಭಾನುವಾರ ರಾತ್ರಿ ಬಂದ 2-3 ಚಿರತೆಗಳ ಹಿಂಡು ಕೊಟ್ಟಿಗೆಯಲ್ಲಿದ್ದ 18 ಮೇಕೆಗಳಲ್ಲಿ 6 ಮೇಕೆಗಳಿಗೆ ಕಚ್ಚಿ ಅವುಗಳ ರಕ್ತ ಕುಡಿದು ಅರ್ಧ ಮಾಂಸವನ್ನು ತಿಂದಿವೆ. ಅಲ್ಲದೇ ಇನ್ನೂ 4 ಮೇಕೆಗಳನ್ನು ಹೊತ್ತೊಯ್ದಿವೆ. ಇಷ್ಟಾದರೂ ಬೆಳಗ್ಗೆವರೆಗೆ ನಾಗೇಗೌಡ ಅವರಿಗೆ ಗೊತ್ತೆಯಾಗಿಲ್ಲ. ಅವರು ಎಂದಿನಂತೆ ಕೊಟ್ಟಿಗೆ ಬಂದು ನೋಡಿದಾಗ ಚಿರತೆ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.
ಏಕಕಾಲಕ್ಕೆ ಎರಡರಿಂದ ಮೂರು ಚಿರತೆಗಳ ಹಿಂಡು ದಾಳಿ ನಡೆಸಿರಬಹುದು ಎಂಬ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಶಾಸಕ ಪುಟ್ಟರಾಜು ಭೇಟಿ ನೀಡಿ, ಮೇಕೆಗಳನ್ನು ಕಳೆದುಕೊಂಡ ನಾಗೇಗೌಡ ಅವರಿಗೆ ಆರ್ಥಿಕ ಸಹಾಯ ಮಾಡಿ ಸರ್ಕಾರದಿಂದಲೂ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಸ್ಥಳೀಯರು ಶಾಸಕರನ್ನು ಸುತ್ತುವರಿದು ಇಲ್ಲಿ ಚಿರತೆ ಸೆರೆಗಾಗಿ ಬೋನ್ ಇರಿಸಬೇಕು, ನಮಗೆ ಜಮೀನಿಗೆ ಹೋಗಲು ಸಹ ಭಯವಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.