ಹುಣಸೂರು: ಲಿಂಗಾಯಿತ ಸಮುದಾಯಕ್ಕೆ ಸೇರಿದ ಬಾಲಕನ ಶಾಲಾ ‘ಬ್ಯಾಗ್’ ಮೇಲೆ ನಾಯಿಯೊಂದು ಮೂತ್ರ ಮಾಡಿದ್ದು, ಆ ಬ್ಯಾಗ್‌ಅನ್ನು ದಲಿತ ವಿದ್ಯಾರ್ಥಿಯಿಂದ ಬಲವಂತವಾಗಿ ಸ್ವಚ್ಛ ಮಾಡಿಸಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬೀಜಗನಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಶಾಲೆಯಲ್ಲಿ ಮಕ್ಕಳು ಆಟವಾಡುತ್ತಿದ್ದ ಸಂದರ್ಭ ಬೀದಿ ನಾಯಿಯೊಂದು ಲಿಂಗಾಯಿತ ಸಮುದಾಯಕ್ಕೆ ಸೇರಿದ ಬಾಲಕನ ಬ್ಯಾಗ್ ಮೇಲೆ ಮೂತ್ರ ಮಾಡಿ ಹೋಗಿದೆ. ಆಗ ಅದೇ ಶಾಲೆಯ ಶಿಕ್ಷಕ ರಾಮಕೃಷ್ಣ ದಲಿತ ಸಮುದಾಯದ ಬಾಲಕನನ್ನು ಕರೆದು ನೀನು ನಾಯಿ ಮೂತ್ರ ವಿಸರ್ಜನೆ ಮಾಡಿರುವ ಬ್ಯಾಗನ್ನು ನೀರಿನಿಂದ ಸ್ವಚ್ಛಗೊಳಿಸಬೇಕು ಎಂದು ಬಲವಂತ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಶಿಕ್ಷಕನ ಈ ನಡೆಯನ್ನು ಖಂಡಿಸಿರುವ ದಸಂಸ ಮುಖಂಡರು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಈ ಬಗ್ಗೆ ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಾಲಕ ನಾನು ಸ್ವಚ್ಛಗೊಳಿಸುವುದಿಲ್ಲ ಎಂದು ಹೇಳಿದಾಗ, ಅದು ನಿನ್ನ ಮನೆ ನಾಯಿ. ಅದಕ್ಕೆ ನೀನೇ ಸ್ವಚ್ಛಗೊಳಿಸಬೇಕು ಎಂದು ಶಿಕ್ಷಕ ಸುಳ್ಳು ಹೇಳಿದ್ದಾರೆ. ನಾನು ಎಷ್ಟೇ ನಿರಾಕರಿಸಿದರೂ ಸಾಬೂನು, ನೀರು ತಂದುಕೊಟ್ಟು ನನ್ನಿಂದ ಬ್ಯಾಗ್‌ಅನ್ನು ಸ್ವಚ್ಛಗೊಳಿಸಿಸಿದರು ಎಂದು ಬಾಲಕ ಅಸಹಾಯಕತೆ ವ್ಯಕ್ತಪಡಿಸಿದ್ದಾನೆ.
ಇತ್ತೀಚೆಗೆ ಶಿಕ್ಷಣ ಇಲಾಖೆಯಲ್ಲಿ ದಲಿತರ ಮಕ್ಕಳ ಮೇಲೆ ದಬ್ಬಾಳಿಕೆ ಹೆಚ್ಚಾಗಿದ್ದು, ದಲಿತ ಸಮುದಾಯ ಎಚ್ಚೆತ್ತುಕೊಳ್ಳಬೇಕಾಗಿದೆ. ಶಾಲೆಯಲ್ಲಿ ಶಿಕ್ಷಕ ರಾಮಕೃಷ್ಣ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹುಣಸೂರು ತಾಲೂಕು ದಸಂಸ ಸಂಚಾಲಕ ರಾಮಕೃಷ್ಣ ಅತ್ತಿಕುಪ್ಪೆ ಕಿಡಿಕಾರಿದ್ದಾರೆ.
ಇನ್ನು ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡ ಕೂಡಲೇ ಕ್ರಮ ಜರುಗಿಸಬೇಕು. ದಲಿತರ ಮಕ್ಕಳು ಎಂದರೆ ನಿಮ್ಮ ಮನೆಯ ಜೀತದಾಳುಗಳಲ್ಲ ಎಂಬುದನ್ನು ಬಲಿತ ಸಮಾಜಕ್ಕೆ ತಿಳಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.