ನ್ಯೂಡೆಲ್ಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಅಮೋಘ ಸಾಧನೆ ತೋರಿರುವ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ರಾಷ್ಟ್ರೀಯ ಪಕ್ಷದ ಮಾನ್ಯತೆ ದೊರೆಯುವುದು ಖಾತರಿಯಾಗಿದೆ. ಇದರೊಂದಿಗೆ ಈ ಸ್ಥಾನಮಾನಕ್ಕೆ ಭಾಜನವಾದ ದೇಶದ ಒಂಬತ್ತನೇ ಪಕ್ಷ ಎಂಬ ಹಿರಿಮೆಯನ್ನು ಎಎಪಿ ತನ್ನದಾಗಿಸಿಕೊಳ್ಳಲಿದೆ.
ನಾಲ್ಕು ರಾಜ್ಯಗಳಲ್ಲಿ ರಾಜ್ಯ ಪಕ್ಷದ ಮನ್ನಣೆ ಗಳಿಸುವ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ದೊರೆಯಲಿದೆ. ಐದು ಸ್ಥಾನಗಳನ್ನು ಗೆಲ್ಲುವ ಜೊತೆಗೆ ಸರಿಸುಮಾರು ಶೇ.13ರಷ್ಟು ಮತ ಪಡೆದಿರುವ ಎಎಪಿಗೆ ಗುಜರಾತ್‌ನಲ್ಲಿ ರಾಜ್ಯ ಪಕ್ಷದ ಸ್ಥಾನಮಾನ ದೊರೆಯುವುದು ನಿಶ್ಚಯವಾಗಿದೆ. ಇದರೊಂದಿಗೆ ನಾಲ್ಕು ರಾಜ್ಯಗಳಲ್ಲಿ ಈ ಸ್ಥಾನಮಾನ ಪಡೆದಂತಾಗಲಿದೆ. ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಈ ಪಕ್ಷ ಗೋವಾದಲ್ಲಿ ಇಬ್ಬರು ಶಾಸಕರನ್ನು ಹೊಂದಿದೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಅದರ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಬಿಆರ್‌ಎಸ್ ಮತ್ತು ಅದರ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಅವರಂತೆ ಈಗ ಕಾಂಗ್ರೆಸೇತರ ವಿಪಕ್ಷಗಳ ಪ್ರಮುಖ ನಾಯಕ ಎಂಬ ಮನ್ನಣೆ ಗಳಿಸಲು ಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್ ಅವರಿಗೆ ಇದು ಅನುಕೂಲವಾಗಲಿದೆ.
ಸದ್ಯ ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎನ್‌ಸಿಪಿ, ಸಿಪಿಐ (ಎಂ), ಸಿಪಿಐ, ಬಿಎಸ್‌ಪಿ ಹಾಗೂ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ರಾಷ್ಟ್ರೀಯ ಪಕ್ಷದ ಮಾನ್ಯತೆ ಹೊಂದಿವೆ. ಅವುಗಳ ಸಾಲಿನಲ್ಲಿ ಈಗ ಎಎಪಿಯೂ ಒಂದಾಗಲಿದೆ.
ಚುನಾವಣಾ ಆಯೋಗವು ರಾಷ್ಟ್ರೀಯ ಪಕ್ಷದ ಮಾನ್ಯತೆ ಅಧಿಕೃತಗೊಳಿಸಿದ ಬಳಿಕ ಎಎಪಿಯು ಪೊರಕೆ ಚಿಹ್ನೆಯೊಂದಿಗೆ ದೇಶದಾದ್ಯಂತ ಚುನಾವಣಾ ಕಣಕ್ಕಿಳಿಯಬಹುದಾಗಿದೆ. ಆಗ ‘ಪೊರಕೆ’ಯ ಚಿಹ್ನೆಯನ್ನು ಬೇರೆ ಯಾರಿಗೂ ನೀಡಲಾಗುವುದಿಲ್ಲ.
ಇನ್ನು ನಾವು ರಾಷ್ಟ್ರೀಯ ಪಕ್ಷದ ಮನ್ನಣೆ ಗಳಿಸಲಿದ್ದೇವೆ. ಗುಜರಾತ್ ಜನ ನಮ್ಮ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿಸಿದ್ದಾರೆ. ಕೆಲವೇ ಕೆಲವು ಪಕ್ಷಗಳಿಗೆ ಈ ಮಾನ್ಯತೆ ಲಭಿಸಿದೆ ಎಂದು ಅರವಿಂದ ಕೇಜ್ರಿವಾಲ್ ಸಂತಸ ಹಂಚಿಕೊಂಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಪಕ್ಷಕ್ಕೆ ಹೆಚ್ಚಿನ ಲಾಭವಾಗುವುದಿಲ್ಲ ಎಂಬುದನ್ನು ಅರಿತಿದ್ದ ಎಎಪಿಯು ಗುಜರಾತ್ ಚುನಾವಣೆಯತ್ತ ಹೆಚ್ಚಿನ ಗಮನ ಹರಿಸಿತ್ತು. ಇದರಿಂದ ಪಕ್ಷಕ್ಕೆ ಅಧಿಕ ಪ್ರಯೋಜನವಾಗಿದೆ. ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆಯದೇ ಇದ್ದಿದ್ದರೆ ಗುಜರಾತ್‌ನಲ್ಲಿ ಪಕ್ಷದ ಸಾಧನೆ ಮತ್ತಷ್ಟು ಉತ್ತಮವಾಗಿರುತ್ತಿತ್ತು ಎಂದು ಎಎಪಿ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.