ಬೆಂಗಳೂರು: ದೆಹಲಿಯಲ್ಲಿ ಓಲಾ, ಊಬರ್, ರ‍್ಯಾಪಿಡೋ ಮುಂತಾದ ಕಂಪನಿಗಳ ಬೈಕ್ ಟ್ಯಾಕ್ಸಿ ಸೇವೆಗೆ ನಿಷೇಧ ಹೇರುವ ಮೂಲಕ ಆಮ್ ಆದ್ಮಿ ಪಾರ್ಟಿಯು ಆಟೋ ಚಾಲಕರ ಹಿತರಕ್ಷಣೆಯಲ್ಲಿ ಬದ್ಧತೆ ತೋರಿಸಿದೆ ಎಂದು ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಮೋಹನ್ ದಾಸರಿ, ಎಂಟನೇ ತರಗತಿ ಪಾಸಾದ ಆಟೋ ಚಾಲಕರಿಗೆ ಮಾತ್ರ ಸರ್ಕಾರ ಬ್ಯಾಡ್ಜ್ ನೀಡಲು ರಾಜ್ಯ ಸರ್ಕಾರ ಮುಂದಾದಾಗ ಆಮ್ ಆದ್ಮಿ ಪಾರ್ಟಿ ತೀವ್ರ ವಿರೋಧ ವ್ಯಕ್ತ ಪಡಿಸಿತ್ತು. ನಮ್ಮ ಹೋರಾಟದ ಪರಿಣಾಮವಾಗಿ ಸರ್ಕಾರವು ನಿರ್ಧಾರವನ್ನು ವಾಪಸ್ ಪಡೆಯಿತು.
ಈಗ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರವು ಬೈಕ್ ಟ್ಯಾಕ್ಸಿಗೆ ನಿಷೇಧ ಹೇರಿದ್ದರಿಂದಾಗಿ ಆಮ್ ಆದ್ಮಿ ಪಾರ್ಟಿಗೆ ಜನಸಾಮಾನ್ಯರು ಹಾಗೂ ಆಟೋ ಚಾಲಕರ ಹಿತವೇ ಮುಖ್ಯವೆಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.
ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಕರ್ನಾಟಕದ ಆಟೋ ಚಾಲಕರು ಹಲವು ಪ್ರತಿಭಟನೆಗಳನ್ನು ಮಾಡಿದ್ದಾರೆ. ಆದರೂ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲುರವರು ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಮುಂದಾಗಿಲ್ಲ. ಇವರಿಗೆ ಓಲಾ, ಊಬರ್, ರ‍್ಯಾಪಿಡೋ ಮುಂತಾದ ಕಂಪನಿಗಳು ಕೊಡುವ ಕಮಿಷನ್ ಮುಖ್ಯವೇ ಹೊರತು, ಆಟೋ ಚಾಲಕರಂತಹ ಜನಸಾಮಾನ್ಯರ ಕಷ್ಟಗಳು ಅರ್ಥವಾಗುವುದಿಲ್ಲ.
ದೆಹಲಿಯಲ್ಲಿ ಜನಸಾಮಾನ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗಿರುವುದರಿಂದ ಅಲ್ಲಿನ ಸರ್ಕಾರ ಸದಾ ಜನಸಾಮಾನ್ಯರ ಪರ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.
ಕರ್ನಾಟದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಮ್ ಆದ್ಮಿ ಪಾರ್ಟಿ ಬದ್ಧವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಸಿಕ್ಕರೆ ಈ ಕುರಿತು ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು.
ಭ್ರಷ್ಟ ಬಿಜೆಪಿಯ 40% ಕಮಿಷನ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆದು ಜನಸಾಮಾನ್ಯರ ಪರವಾದ ಆಡಳಿತ ನೀಡುವ ಆಮ್ ಆದ್ಮಿ ಪಾರ್ಟಿಯನ್ನು ಅಧಿಕಾರಕ್ಕೆ ತರಲು ಆಟೋ ಚಾಲಕರು ಒಗ್ಗೂಡಬೇಕು ಎಂದು ಮೋಹನ್ ದಾಸರಿ ಹೇಳಿದರು.