ಬಿಜೆಪಿ ಕಾರ್ಯಕರ್ತರಿಂದ ನಿಂದನೆ, ಬೆದರಿಕೆ: ಪೊಲೀಸರಿಗೆ ಎಎಪಿ ದೂರು
ಬೆಂಗಳೂರು: ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಮಾಜಿ ನ್ಯಾಯಾಧೀಶ ಎಂ.ವೆಂಕಟರಮಣಪ್ಪ ಅವರಿಗೆ ಬಿಜೆಪಿ ಕಾರ್ಯಕರ್ತನೊಬ್ಬ ಚಾಕು ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವುದು ಜೀವನ್ ಭೀಮಾ ನಗರದಲ್ಲಿ ನಡೆದಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ನೇತೃತ್ವದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೋಹನ್ ದಾಸರಿ, ಸಿವಿ ರಾಮನ್ ವಿಧಾನಸಭಾ ಕ್ಷೇತ್ರದ ಮಲ್ಲೇಶ್ ಪಾಳ್ಯದಲ್ಲಿ ಆಮ್ ಆದ್ಮಿ ಪಾರ್ಟಿಯ ನೂತನ ಕಚೇರಿ ಉದ್ಘಾಟನೆ ಮಾಡಲಾಯಿತು.
ಉದ್ಘಾಟನಾ ಕಾರ್ಯಕ್ರಮ ಮುಗಿಸಿಕೊಂಡು ಎಂ.ವೆಂಕಟರಮಣಪ್ಪ ಅವರು ತಮ್ಮ ಮಕ್ಕಳ ಮಾಲೀಕತ್ವದ ಗೊಂಗೊರ ಹೋಟೆಲ್‌ಗೆ ತೆರಳಿದಾಗ, ಬಿಜೆಪಿ ಕಾರ್ಯಕರ್ತನೊಬ್ಬ ನಾಲ್ಕು ಗೂಂಡಾಗಳೊಂದಿಗೆ ಅಲ್ಲಿಗೆ ಬಂದು ಚಾಕು ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಪಕ್ಷದ ಕಚೇರಿ ಹಾಗೂ ಅವರ ಹೋಟೆಲನ್ನು ಖಾಲಿ ಮಾಡಬೇಕು ಎಂದು ಬೆದರಿಕೆ ಹಾಕಿದ್ದಾನೆ ಎಂದು ಹೇಳಿದರು.
ಸಿವಿ ರಾಮನ್ ನಗರದ ಬಿಜೆಪಿ ಶಾಸಕ ಎಸ್.ರಘು ಅವರಿಗೆ ಆಮ್ ಆದ್ಮಿ ಪಾರ್ಟಿಯ ಭಯ ಶುರುವಾಗಿದೆ. ಕ್ಷೇತ್ರದೆಲ್ಲೆಡೆ ಆಮ್ ಆದ್ಮಿ ಪಾರ್ಟಿಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿರುವುದು ಶಾಸಕರ ನಿದ್ದೆ ಗಡೆಸಿದೆ. ಆದ್ದರಿಂದ ಬೆಂಬಲಿಗರನ್ನು ಛೂ ಬಿಟ್ಟು ಹೆದರಿಸುವ ಕೆಲಸ ಮಾಡುತ್ತಿದ್ದಾರೆ.
ಆದರೆ ಇಂತಹ ದುಷ್ಕೃತ್ಯಗಳಿಗೆ ಆಮ್ ಆದ್ಮಿ ಪಾರ್ಟಿ ಹೆದರುವುದಿಲ್ಲ. ಬಿಜೆಪಿಯ ಭ್ರಷ್ಟ ಆಡಳಿತವನ್ನು ಕೊನೆಗಾಣಿಸಿ, ಪಾರದರ್ಶಕ ಹಾಗೂ ಜನಪರ ಆಡಳಿತವನ್ನು ಅಧಿಕಾರಕ್ಕೆ ತರುವ ನಮ್ಮ ಪ್ರಯತ್ನ ಮುಂದುವರಿಯುತ್ತದೆ. ನಾವು ಇದರಲ್ಲಿ ಯಶಸ್ಸು ಕಾಣಲಿದ್ದೇವೆ ಎಂದು ಮೋಹನ್ ದಾಸರಿ ಹೇಳಿದರು.
ಎಎಪಿ ಮುಖಂಡ, ವಕೀಲ ಹಾಗೂ ಮಾಜಿ ನ್ಯಾಯಾಧೀಶ ಎಂ.ವೆಂಕಟರಮಣಪ್ಪ ಮಾತನಾಡಿ, ನಾವು ಕಾನೂನು ಪಾಲನೆಯಲ್ಲಿ ನಂಬಿಕೆ ಹೊಂದಿದ್ದೇವೆ. ಬಿಜೆಪಿ ಕೂಡ ಇದೇ ಮಾರ್ಗದಲ್ಲಿ ಸಾಗಬೇಕು ಎಂದು ಬಯಸುತ್ತೇವೆ. ಅದರ ಬದಲು, ರೌಡಿಗಳನ್ನು ಬಿಟ್ಟು ಧಮಕಿ ಹಾಕಿಸುವುದು ಸರಿಯಲ್ಲ.
ಬಿಜೆಪಿ ಗೂಂಡಾಗಿರಿಗೆ ಅಂತ್ಯಹಾಡಲು ಸಿವಿ ರಾಮನ್ ನಗರದ ಜನರು ಮುಂದಾಗಬೇಕು. ಶಾಸಕರ ಬೆಂಬಲಿಗರಿಂದ ತೊಂದರೆ ಅನುಭವಿಸುವವರು ನಮ್ಮ ಕಚೇರಿಗೆ ಮಾಹಿತಿ ನೀಡಬಹುದು. ಕ್ಷೇತ್ರದ ಜನರನ್ನು ಗೂಂಡಾಗಿರಿಯಿಂದ ಕಾಪಾಡಲು ಆಮ್ ಆದ್ಮಿ ಪಾರ್ಟಿ ಸದಾ ಸಿದ್ಧವಾಗಿರುತ್ತದೆ ಎಂದು ಹೇಳಿದರು.