ಚಿತ್ರದುರ್ಗ: ನಿನ್ನೆ ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಮುರುಘಾಶ್ರೀಗಳ ವಿರುದ್ಧ ದಾಖಲಾಗಿರುವ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಇಂದು ಬೆಳಗಿನ ಜಾವದವರೆಗೂ ಸಂಧಾನ ಸಭೆ ನಡೆದಿದ್ದು ಅದು ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.
ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಸಂಧಾನ ಸಭೆಗೆ ಖುದ್ದು ಮುರುಘಾಶ್ರೀ, ಬಸವರಾಜನ್ ನೇರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಮಠದ ಆಡಳಿತಾಧಿಕಾರಿಯಾಗಿ ಬಸವರಾಜನ್ ಮುಂದುವರಿಕೆಗೆ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.
ಈ ಸಂಧಾನ ಸಭೆಗೆ ಮಠಾಧೀಶರು, ಮುಖಂಡರು ಕೂಡ ಭಾಗಿಯಾಗಿದ್ದು, ಆರೋಪ ಪ್ರತ್ಯಾರೋಪಗಳನ್ನು ಗಮನಸಿದರು ಎಂದು ತಿಳಿದು ಬಂದಿದೆ. ಇತ್ತ ತಮ್ಮ ಮೇಲಿನ ಲೈಂಗಿಕ ಆರೋಪದ ಬಗ್ಗೆ ಶನಿವಾರ ರಾತ್ರಿಯೇ ಶ್ರೀಗಳು ಮಾತಾಡಿದ್ದು, ನಮ್ಮ ಪಕ್ಕದಲ್ಲೇ ಇದ್ದು ಹೋದವರೇ ಪಿತೂರಿ, ಒಳಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಇನ್ನು ಯಾವ ಸಮಸ್ಯೆ, ಆರೋಪ ಶಾಶ್ವತ ಅಲ್ಲ. ಇದು ಮುರುಘಾ ಶರಣರ ಅಭಿಮಾನವನ್ನು ಎಬ್ಬಿಸುವ ಕೆಲಸವಾಗಿದೆ. ಮೇಲೆಕ್ಕೆ ಹೋದಂತೆಲ್ಲ ಆಪತ್ತುಗಳು, ಕಿರುಕುಳಗಳು ಇರ್ತಾವೆ ಎಂದು ಹೇಳಿದ್ದ ಅವರು, ನಾವು ಸಂಧಾನಕ್ಕೂ ಸಿದ್ಧ, ಸಮರಕ್ಕೂ ಬದ್ಧ. ಸಂಧಾನ ಮತ್ತು ಸಮರ. 2 ಆಯ್ಕೆಗಳು ಇವೆ ಅಂತ ತಿಳಿಸಿದ್ದರು.
ಪ್ರಕರಣ ಸಂಬಂಧ ಇಂದು ಸಿಡಬ್ಲ್ಯುಸಿಯಲ್ಲಿ ಬಾಲಕಿಯರ ಹೇಳಿಕೆ ದಾಖಲು ಮಾಡಲಾಗುತ್ತದೆ. ಸಿಡಬ್ಲ್ಯುಸಿಯಲ್ಲಿ ಅಧಿಕಾರಿಗಳು ಕೌನ್ಸಿಲಿಂಗ್ ಮಾಡಲಿದ್ದು, ಈಗ ಪ್ರಕರಣ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುವುದರ ನಿರ್ಧಾರ ಸದ್ಯ ಸಂತ್ರಸ್ತೆಯರ ಹೇಳಿಕೆ ಮೇಲೆ ನಿಂತಿದೆ.
ಅಲ್ಲದೆ ಬಾಲಕಿಯರ ಹೇಳಿಕೆಯಿಂದ ಮುರುಘಾಶ್ರೀಗಳ ಭವಿಷ್ಯ ಯಾವ ರೂಪ ಪಡೆಯುತ್ತಿದೆ ಎಂಬುವುದು ಕೂಡ ನಿರ್ಧಾರವಾಗಲಿದೆ. ಸದ್ಯ ಸಂತ್ರಸ್ತೆಯರು ಚಿತ್ರದುರ್ಗದ ಬಾಲಮಂದಿರದಲ್ಲಿದ್ದಾರೆ.