ಅದಾನಿಯ ಅವ್ಯವಹಾರದ ಕುರಿತು
ದೊಡ್ಡ ಧ್ವನಿಯಲ್ಲಿ ಮಾತಾಡದಿರಿ
ಅಣ್ಣ ಮಲಗಿದ್ದಾರೆ ಬಹಳ ಕಾಲದಿಂದ…!
ನಿದ್ದೆಯಿಂದೆದ್ದು ಉಪವಾಸ ಕುಳಿತು
ಕೇಂದ್ರ ಸರಕಾರವನ್ನೇ ಕಿತ್ತೆಸೆದಾರು..
ಮತ್ತೊಮ್ಮೆ ಲೋಕಪಾಲ್ ಬೇಕೆಂದಾರು
ಕೇಜ್ರಿವಾಲ, ಕಿರಣ ಬೇಡಿ, ರಾಮದೇವನನ್ನು
ಕರೆದು ಹೋರಾಟ ಮಾಡಿಯಾರು..!
ಹಾಗಾಗಿ ಭಕ್ತರೇ ಅದಾನಿ ಕುರಿತು
ಚರ್ಚೆ ಮಾಡದಿರಿ, ಮೌನವಾಗಿರಿ..!
ಕೃಷಿ ಮಸೂದೆ ಬಗೆಗೆ ಗಲಾಟೆ ಬೇಡ
ರೈತರ ಹೋರಾಟದತ್ತ ಗಮನಿಸದಿರಿ
ಏಕೆಂದರೆ ಅಣ್ಣ ಮಲಗಿದ್ದಾರೆ,
ಒಂದೊಮ್ಮೆ ಅಣ್ಣನಿಗೆ ವಿಷಯ ತಿಳಿದರೆ
ರೈತರ ಹೊಲಕ್ಕೆ ದೌಡಾಯಿಸಿ
ತಾನೂ ರೈತನಾಗಿದ್ದೆನೆಂದು ಸಂತೈಸಿ
ಕೃಷಿಮಂತ್ರಿಯನ್ನು ಮನೆಗೆ ಕಳುಹಿಸಿಯಾರು
ಉದ್ಯಮಿಗಳ ಸಂಚನ್ನು
ಅಧಿಕಾರಶಾಹಿಗಳ ಮೋಸವನ್ನು
ಬಯಲು ಮಾಡಿಯಾರು…
ಅದಕ್ಕಾಗಿ ಮೌನವಾಗಿರಿ,
ಗಲಾಟೆ ಮಾಡದಿರಿ, ಅಣ್ಣ ಎದ್ದಾರು…!
ಲಕ್ಷ ಕೋಟಿಗಳ ಸಾಲದ ಕುರಿತು
ವಿಮಾನ, ವಿಮಾನ ನಿಲ್ದಾಣಗಳ,
ಬಂದರುಗಳ ಮಾರಾಟದ ಕುರಿತು
ಮಾತನಾಡಬೇಡಿ,
ಚರ್ಚಿಸಬೇಡಿ….
ಏಕೆಂದರೆ ಅಣ್ಣ ಮಲಗಿದ್ದಾರೆ,
ಗಾಢ ನಿದ್ದೆಯಲ್ಲಿದ್ದಾರೆ….!
ಅವರ ಜೊತೆಗಿದ್ದವರು
ಮೌನವ್ರತದಲ್ಲಿದ್ದಾರೆ….!
ದೇಶದ ಆಸ್ತಿ ಮಾರಾಟ ಮಾಡಿದ್ದು
ಕಮಿಷನ್ ಪಡೆದು ಲೂಟಿಗೈದದ್ದು
ಸಾಲ ಮಾಡಿ ತುಪ್ಪ ತಿಂದದ್ದು ತಿಳಿದರೆ
ಅಣ್ಣ ಸಿಡಿದೆದ್ದು ಮತ್ತೆ ಹೋರಾಟಗೈದಾರು
ತಾನು ಗಾಂಧಿವಾದಿ ಎಂದು,
ಸ್ವಾತಂತ್ರ್ಯ ಹೋರಾಟಗಾರನೆಂದು,
ಅಧಿಕಾರಶಾಹಿಗಳ ಹುಟ್ಟಡಗಿಸಿಯಾರು
ಹಾಗಾಗಿ ಮೌನವಾಗಿರಿ ಭಕ್ತರೇ
ವಿಷಯಾಂತರಗೈದು ಭಜನೆ ಮಾಡಿ..
ಭಜನೆಯೇ ಅಣ್ಣನಿಗೆ ಜೋಗುಳವಾಗಲಿ..
l ಡಾ. ಸುಬ್ರಹ್ಮಣ್ಯ ಭಟ್, ಬೈಂದೂರು.