ವಿಜಯಪಥ ಸಮಗ್ರ ಸುದ್ದಿ
ಚಿತ್ರದುರ್ಗ: ದೇವರಿಗೆ ತೆಂಗಿನಕಾಯಿ ಒಡೆದು ಕೊಡು ಎಂದು ಕೇಳಿದ ಅದೇ ಗ್ರಾಮದ ವ್ಯಕ್ತಿಗೆ ದೇವಸ್ಥಾನದ ಪೂಜಾರಿ ತೆಂಗಿನಕಾಯಿ ಒಡೆಯುವ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಹಬ್ಬಿನಹೊಳೆ ವ್ಯಾಪ್ತಿಯಲ್ಲಿ ಬರುವ ಟಿ.ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಗ್ರಾಮದ ಎಲ್ಲಮ್ಮ ದೇವಿಯ ಜಾತ್ರೆ ಕಳೆದ ಎರಡು ಮೂರು ದಿನಗಳಿಂದ ನಡೆದಿದೆ ಭಾನುವಾರ ಕೊನೆಯ ದಿನವಾಗಿದ್ದು, ದೇವಿಯು ಗ್ರಾಮಗಳಿಗೆ ಬರುವ ಸಂಪ್ರದಾಯವಿದೆ. ಇದೇ ಸಮಯದಲ್ಲಿ ಗ್ರಾಮಸ್ಥರು ದೇವಸ್ಥಾನಕ್ಕೆ ಹೋಗಿ ಹಣ್ಣು-ಕಾಯಿಯೊಂದಿಗೆ ಪೂಜೆ ಮಾಡಿಸಿಕೊಂಡು ಬರುವುದು ಪದ್ಧತಿ ಇದೆ. ಅದರಂತೆ ಅದೇ ಗ್ರಾಮದ ಶೇಖರ್ ಎಂಬುವರು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಕೊಡಿ ಎಂದು ಪೂಜಾರಿ ಭರತ್ ಕೇಳಿದ್ದಾರೆ.
ಆದರೆ ಪೂಜಾರಿ ಭರತ್ ಭಕ್ತನನ್ನು ಹಿಂದೆ ಸರಿಯುವಂತೆ ಹೇಳಿದ್ದಾನೆ. ಶೇಖರ್ ಇನ್ನೊಮ್ಮೆ ಪೂಜೆ ಮಾಡಿ ಕೊಡಿಕೊಡಿ ಎಂದು ಕೇಳಿದ್ದಕ್ಕೆ ಪೂಜೆಮಾಡಿ ಕೊಡುವ ಬದಲು ಕೈಯಲ್ಲಿದ್ದ ಮಚ್ಚಿನಿಂದ ಏಕಾಏಕಿ ತಲೆಗೆ ಹಲ್ಲೇ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಶೇಖರ್ ಹಿರಿಯೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಕರಣ ಸಂಬಂಧ ಹಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಗೆ ಹಳೆ ವೈಷಮ್ಯ ಕಾರಣವೆಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬಂದಿದ್ದು, ಸದ್ಯಕ್ಕೆ ದೇವಸ್ಥಾನದ ಬಾಗಿಲು ಹಾಕಲಾಗಿದೆ. ದೇವಾಲಯದ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಆದರೆ ಹಲ್ಲೆ ಮಾಡಿರುವ ಪೂಜಾರಿಯನ್ನು ಬಂಧಿಸಿರುವ ಬಗ್ಗೆ ಇನ್ನು ಖಚಿತ ಮಾಹಿತಿ ತಿಳಿದು ಬಂದಿಲ್ಲ.