ಬೆಂಗಳೂರು: ರೈತರ ಸಾಲ ಮನ್ನಾ ವಿಷದಲ್ಲಿ ಬಿಜೆಪಿಯ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ನೀಡಿರುವ ರೈತ ವಿರೋಧಿ ಹೇಳಿಕೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಬೆಂಗಳೂರಿನ ಪ್ರತಿಭಟನೆ ನಡೆಸಿದರು.
ಇಂದು ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಯುಪಿಎ ಸರ್ಕಾರ ರೈತರ ಲಕ್ಷಾಂತರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದನ್ನು ಪ್ರಶ್ನಿಸಿ, ರೈತರಿಗೆ ಸಾಲ ಮನ್ನಾ ಮಾಡಿದರೆ ಯಾವುದೇ ರೀತಿಯ ಉಪಯೋಗ ಇಲ್ಲ ಎಂದು ಹೇಳಿಕೆ ನೀಡುವ ಮೂಲಕ ತೇಜಸ್ವಿ ಸೂರ್ಯ ರೈತ ವಿರೋಧಿ ನೀತಿ ಅನುಸರಿಸಿರುವುದು ಬಯಲಾಗಿದೆ ಎಂದು ಕಿಡಿಕಾರಿದರು.
ಅಲ್ಲದೆ ಬಿಜೆಪಿಗರು ರೈತರ ವಿರೋಧಿಗಳೆಂಬುದು ಇದರಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ. ಕೂಡಲೇ ಇಂತಹ ರೈತ ವಿರೋಧಿ ಹಾಗೂ ದೇಶದ್ರೋಹಿ ಸಂಸದ ತೇಜಸ್ವಿ ಸೂರ್ಯನನ್ನು ಬಿಜೆಪಿ ತನ್ನ ಪಕ್ಷದಿಂದ ಹೊರ ಹಾಕಬೇಕು ಹಾಗೂ ಇವನನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ನರೇಂದ್ರ ಮೋದಿ ದೇಶದ ಜನಸಾಮಾನ್ಯರ ಹಣವನ್ನು ಲೂಟಿ ಮಾಡಿರುವ ಅದಾನಿ ಸಂಸ್ಥೆಗೆ ಲಕ್ಷಾಂತರ ಕೋಟಿ ಹಣ ಸಾಲ ಮನ್ನಾ ಮಾಡುತ್ತಾರೆ. ಆದರೆ ರೈತರ ಬಗ್ಗೆ ನಿರ್ಲಕ್ಷ್ಯದ ಮಾತನಾಡಿರುವ ತೇಜಸ್ವಿ ಸೂರ್ಯ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಬಿಜೆಪಿಯ ಇಬ್ಬಗೆತನ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಪಕ್ಷದ ಮುಖಂಡರಾದ ಜಿ.ಜನಾರ್ದನ್, ಎ.ಆನಂದ್, ಮಂಜುನಾಥ್, ಪ್ರಕಾಶ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.