ಬೆಂಗಳೂರು ಗ್ರಾಮಾಂತರ: ರಾಜ್ಯ ಚುನಾವಣಾ ಆಯೋಗವು ಜಿಲ್ಲೆಯಲ್ಲಿ 2023ನೇ ಜನವರಿ 2023ರ ಏಪ್ರಿಲ್ ವರೆಗೆ ಅವಧಿ ಮುಕ್ತಾಯವಾಗಲಿರುವ ದೇವನಹಳ್ಳಿ ತಾಲೂಕಿನ ಹಾರೋಹಳ್ಳಿ ಮತ್ತು ಕೋರಮಂಗಲ ಗ್ರಾಮ ಪಂಚಾಯಿತಿಗೆ ಸಾರ್ವತ್ರಿಕ ಚುನಾವಣೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ 15-ತಿಪ್ಪೂರು ಗ್ರಾಮ ಪಂಚಾಯಿತಿಯ 3-ವಾಣಿಗರಹಳ್ಳಿ ಕ್ಷೇತ್ರದಲ್ಲಿ ಮರಣದಿಂದ ತೆರವಾಗಿರುವ ಒಂದು ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಯನ್ನು ನಡೆಸಲು ಚುನಾವಣಾ ವೇಳಾಪಟ್ಟಿ ಘೋಷಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಚುನಾವಣಾ ವೇಳಾಪಟ್ಟಿಯಂತೆ 2023ರ ಫೆಬ್ರವರಿ 8 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗಿದ್ದು, 2023ರ ಫೆಬ್ರವರಿ 14 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದ್ದು, ಫೆಬ್ರವರಿ 15 ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಫೆಬ್ರವರಿ 17 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ.
ಫೆಬ್ರವರಿ 25 ರಂದು ಮತದಾನ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಫೆಬ್ರವರಿ 27 ರಂದು ಮರು ಮತದಾನ ಅವಶ್ಯವಿದ್ದರೆ, ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮರುಮತದಾನ ನಡೆಯಲಿದೆ.
ಫೆಬ್ರವರಿ 28ರ ಮಂಗಳವಾರದಂದು ತಾಲ್ಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತಗಳ ಏಣಿಕೆ ಕಾರ್ಯ ನಡೆಯಲಿದ್ದು, ಫೆಬ್ರವರಿ 28 ರಂದು ಚುನಾವಣಾ ಮಾದರಿ ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ.
ಚುನಾವಣಾ ನೀತಿ ಸಂಹಿತೆಯು 2023ರ ಫೆ.8 ರಿಂದ ಫೆಬ್ರವರಿ 28 ರವರೆಗೆ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅರ್.ಲತಾ ತಿಳಿಸಿದ್ದಾರೆ.