ಗದಗ: ಭಾರತೀಯ ಜನತ ಪಕ್ಷ (ಬಿಜೆಪಿ) ರಾಕ್ಷಸರ ಸರ್ಕಾರವಾಗಿದೆ, ಕೊಲೆ ಮಾಡಿ ಎಂದು ಹೇಳುವ, ಕಮಿಷನ್ ಕೇಳುವ ಸರ್ಕಾರವಿದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ನಗರದ ಕೆ.ಎಚ್. ಪಾಟೀಲ್ ಸಭಾ ಭವನದಲ್ಲಿ ಆಯೋಜಿಸಿದ್ದ ಗೃಹ ಜ್ಯೋತಿ, ಗೃಹ ಲಕ್ಷ್ಮಿ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಇರುವುದು ಕಮಿಷನ್ ಸರ್ಕಾರ ಎಂದು ಗದಗ ಜಿಲ್ಲೆಯ ದಿಂಗಾಲೇಶ್ವರ ಸ್ವಾಮಿಯೇ ಬಹಿರಂಗವಾಗಿಯೇ ಹೇಳಿದ್ದಾರೆ. 40%ನಲ್ಲಿ ಮಠ ಮಾನ್ಯಗಳಿಗೆ 10% ಡಿಸ್ಕೌಂಟ್ ಕೊಡುತ್ತಾರೆ. ಅಲ್ಲೂ 30% ಕೇಳ್ತಾರೆ. ಅಂದರೆ ಬಿಜೆಪಿಯವರ ಬುದ್ಧಿ, ವಿಚಾರಧಾರೆಗಳು, ಚಿಂತನೆ ಹಾಗೂ ದೃಷ್ಟಿಕೋನ ರಾಕ್ಷಸರಂತಿದೆ ಎಂದು ಕಿಡಿಕಾರಿದರು.
ಇನ್ನು ಮಂದಿರ, ಮಸೀದಿ, ಮಠಗಳಿಗೂ ಪರ್ಸೆಂಟೆಜ್ ಬಿಡುತ್ತಿಲ್ಲ ಇವರು. ಈ ಬಿಜೆಪಿಗರಿಗೆ ನರಕದಲ್ಲಿಯೂ ಜಾಗ ಸಿಗುವುದಿಲ್ಲ. ಅವರಿಗೆ ಪ್ರತ್ಯೇಕ ಜಾಗವೇ ಬೇಕು. 40% ಕಮಿಷನ್‌ನಿಂದಾಗಿ ಹಲವಾರು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಪ್ರಧಾನಿ ನರೇಂದ್ರ ಮೋದಿ ಅವರು ತುಟುಕ್ ಪಿಟಕ್ ಎನ್ನುತ್ತಿಲ್ಲ ಎಂದು ಹರಿಹಾಯ್ದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಗಿಸಿ ಎಂಬ ಸಚಿವ ಅಶ್ವಥ್ ನಾರಾಯಣ್ ಅವರ ಹೇಳಿಕೆಗೆ ತಿರುಗೇಟು ನೀಡಿದ ದುರ್ಜೇವಾಲಾ, ಇಂತಹ ಹಿಂಸಾತ್ಮಕ ಮಾತುಗಳಿಂದ ಗಾಂಧೀಜಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಅನೇಕರ ಹತ್ಯೆ ಆಯಿತು.
ಆದರೆ, ಇದಕ್ಕೆಲ್ಲ ಕಾಂಗ್ರೆಸ್ ಹೆದರುವುದಿಲ್ಲ. ಬಡವರ ಪರವಾಗಿ ಕೆಲಸ ಮಾಡುವ ನಮ್ಮ ತತ್ವ ಸಿದ್ಧಾಂತಗಳನ್ನು ಸಾಯಿಸಲು ಸಾಧ್ಯವಿಲ್ಲ. ಇನ್ನು ಬಿಜೆಪಿಯ ಸಿ.ಪಿ.ಯೋಗೇಶ್ವರ್ ಅವರೇ ಅಮಿತ್ ಶಾರನ್ನು ರೌಡಿ ಎಂದು ಆರೋಪ ಮಾಡುತ್ತಾರೆ. ಯೋಗೇಶ್ವರ ಮಾಡಿದ ಆರೋಪ ಸುಳ್ಳಾದರೇ ಅವರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.