ಬೆಂಗಳೂರು: ಬೆಂಗಳೂರು ನಗರದಲ್ಲಿ ಕೇಂದ್ರ ಸರ್ಕಾರದ ಫೇಮ್ 2 ಯೋಜನೆ ಅಡಿಯಲ್ಲಿ ಸಿಇಎಸ್ಎಲ್ ಟೆಂಡರ್ ಕಂಪನಿ ಮೂಲಕ ಒಟ್ಟು 921 ಹವಾ ನಿಯಂತ್ರಣ ರಹಿತ ಎಲೆಕ್ಟ್ರಿಕ್ ಹೊಸದಾಗಿ ಬಸ್‌ಗಳು ಮುಂದಿನ ದಿನಗಳಲ್ಲಿ ಓಡಾಡಲಿವೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಸಜೆ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅವರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈ ಹೊಸ 921 ಹವಾ ನಿಯಂತ್ರಣ ರಹಿತ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಹೀಗಾಗಿ ರಾಜ್ಯ ರಾಜಧಾನಿಗೆ 921 ಬಸ್‌ಗಳನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದ್ದು, ಅದಕ್ಕಾಗಿ ಸಹಾಯ ಧನವನ್ನೂ ನೀಡಲಿದೆ ಎಂದರು.
ಇನ್ನು ಈ ಬಸ್‌ಗಳಿಗೆ ರಾಜ್ಯ ಸರ್ಕಾರವೂ ಕೂಡ ಧನಸಹಾಯ ನೀಡಲಿದ್ದು, ಇದನ್ನು ಬಳಸಿಕೊಂಡು ಬಿಎಂಟಿಸಿ ಈ ಬಸ್‌ಗಳನ್ನು ಸಿಇಎಸ್‌ಎಲ್ ಮೂಲಕ ಕಾರ್ಯಚರಣೆ ನಡೆಸಲಿವೆ ಎಂದರು.
ಒಂದು ಎಲೆಕ್ಟ್ರಿಕ್ ಬಸ್‌ಗೆ ಸರಿ ಸುಮಾರು 1.50 ಕೋಟಿ ರೂ. ಇದೆ. ಅದರನ್ವಯ ಕೇಂದ್ರ ಸರ್ಕಾರ ಪ್ರತಿ ಬಸ್‌ಗೆ 39.08 ಲಕ್ಷ ರೂ.ಸಹಾಯಧನ ನೀಡಲಿದೆ. ಕೇಂದ್ರ ಈ ಹಣವನ್ನು ಬಸ್ ಒದಗಿಸುವ ಕಂಪನಿಗೆ ನೀಡಲಿದೆ ಎಂದರು.
ಇನ್ನು ಬಾಕಿ ಮೊತ್ತವನ್ನು ಸಿಇಎಸ್‌ಎಲ್ ಟೆಂಡರ್ ಕಂಪನಿಯೇ ಭರಿಸಿ ಬಸ್ ಖರೀದಿ ಮಾಡಲಿದೆ. ಬಿಎಂಟಿಸಿ ಪ್ರತಿ ಕಿ.ಮೀಗೆ 40ರೂ. ನಿಗದಿ ಮಾಡಿದ್ದು, ಆ ಮೊತ್ತವನ್ನು ಸಿಇಎಸ್ಎಲ್‌ಗೆ ನೀಡಲಾಗುತ್ತದೆ. ಚಾಲಕನನ್ನು ಕಂಪನಿಯೇ ಒದಗಿಸುತ್ತದೆ. ನಿರ್ವಾಹಕರು ಮಾತ್ರ ಬಿಎಂಟಿಸಿ ನಿಗದವರು ಇರಲಿದ್ದಾರೆ ಎಂದು ವಿವರಿಸಿದರು.