ಲಂಡನ್: ಬ್ರಿಟನ್ನ 96 ವರ್ಷದ ರಾಣಿ ಎಲಿಜಬೆತ್-2 ಅನಾರೋಗ್ಯದಿಂದ ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ.
ರಾಣಿ ಎಲಿಜಬೆತ್ ಕಳೆದ ವರ್ಷ ಅಕ್ಟೋಬರ್‌ನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ರಾತ್ರಿ ಸ್ಕಾಟ್ಲೆಂಡ್ ಅರಮನೆಯಲ್ಲಿ ಅಸುನೀಗಿದ್ದಾರೆ. 1923ರಿಂದ ಬ್ರಿಟನ್ನ ರಾಣಿಯಾಗಿದ್ದರು.
ರಾಣಿ ಎಲಿಜಬೆತ್ ಆರೋಗ್ಯದ ಬಗ್ಗೆ ವೈದ್ಯರ ಸಲಹೆಯಂತೆ ನಿಗಾ ವಹಿಸಲಾಗಿತ್ತು. ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಅವರನ್ನು ಉಳಿಯಲು ಪ್ರಯತ್ನಿಸಲಾಗಿತ್ತಾದರೂ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಬಾಲ್ಮೋರಲ್ ಕ್ಯಾಸಲ್‍ನಲ್ಲಿ ಉಳಿದಿದ್ದ ರಾಣಿ ಎಲಿಜಬೆತ್‍ರನ್ನು ನೋಡಲು, ಆರೋಗ್ಯ ವಿಚಾರಿಸಲು ಗುರುವಾರ ಬೆಳಗ್ಗೆಯಿಂದಲೇ ಸಂಬಂಧಿಕರು ತಂಡೋಪ ತಂಡವಾಗಿ ಆಗಮಿಸಿದ್ದರು.
ರಾಣಿ ಎಲಿಜಬೆತ್ ನಿಧನದಿಂದ ಬ್ರಿಟನ್ ಸರ್ಕಾರ ಎಲ್ಲ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ದೇಶ ವಿದೇಶದ ಹಲವು ಗಣ್ಯರು ರಾಣಿ ಎಲಿಜಬೆತ್-2 ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಮೋದಿ ಸಂತಾಪ: 2015 ಮತ್ತು 2018 ರಲ್ಲಿ ನನ್ನ ಯುಕೆ ಭೇಟಿಯ ವೇಳೆ ನಾನು ಹರ್ ಮೆಜೆಸ್ಟಿ ಕ್ವೀನ್ ಎಲಿಜಬೆತ್ ಅವರೊಂದಿಗೆ ಅವಿಸ್ಮರಣೀಯ ಸಭೆಗಳನ್ನು ನಡೆಸಿದ್ದೇನೆ. ನಾನು ಅವರ ಪ್ರೀತಿ ಮತ್ತು ಆದರವನ್ನು ಎಂದಿಗೂ ಮರೆಯುವುದಿಲ್ಲ. ಸಭೆಯೊಂದರಲ್ಲಿ ಅವರು ಮಹಾತ್ಮ ಗಾಂಧಿಯವರು ತಮ್ಮ ಮದುವೆಗೆ ಉಡುಗೊರೆಯಾಗಿ ನೀಡಿದ ಕರವಸ್ತ್ರವನ್ನು ನನಗೆ ತೋರಿಸಿದರು. ನಾನು ಯಾವಾಗಲೂ ಆ ಸೂಚಕವನ್ನು ಗೌರವಿಸುತ್ತೇನೆ ಎಂದು ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.